ರಾಯಚೂರು: 20 ರೂ. ಚಿಕನ್ ಕಬಾಬ್‍ಗಾಗಿ ಅಂಗಡಿ ಮಾಲೀಕನಿಗೆ ಪಾನಮತ್ತನೋರ್ವ ಚಾಕುವಿನಿಂದ ಇರಿದಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಶಾಕೀರ್ ಚಾಕುವಿನಿಂದ ಇರಿದ ಆರೋಪಿ. ಮಂಗಳವಾರ ರಾತ್ರಿ ನಗರದ ಅಶೋಕ ಡಿಪೋ ಬಳಿಯ ಮದೀನಾ ಚಿಕನ್ ಕಬಾಬ್ ಸೆಂಟರ್‍ನಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಗಾಯಗೊಂಡ ಭೀಮೇಶ್ ಹಾಗು ಅಂಗಡಿ ಮಾಲೀಕ ಅಜೀಮ್ ಎಂಬವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಘಟನೆ?: ಮಂಗಳವಾರ ರಾತ್ರಿ ಅಜೀಮ್ ಅವರ ಕಬಾಬ್ ಸೆಂಟರ್‍ಗೆ ಬಂದ ಶಾಕೀರ್ 20 ರೂ.ಗೆ ಚಿಕನ್ ಕಬಾಬ್ ಕೇಳಿದ್ದಾನೆ. ಆದರೆ ಅಜೀಮ್ 20 ರೂ.ಗೆ ಚಿಕನ್ ಕಬಾಬ್ ಬರಲ್ಲ ಎಂದು ಹೇಳಿದ್ದಾರೆ. ಪಾನಮತ್ತನಾದ ಶಾಕೀರ್ ಅಂಗಡಿ ಮಾಲೀಕ ಅಜೀಮ್ ಜೊತೆ ಜಗಳಕ್ಕೆ ಇಳಿದಿದ್ದಾನೆ. ಸ್ಥಳದಲ್ಲಿದ್ದ ಭೀಮೇಶ್ ಜಗಳ ಬಿಡಿಸಲು ಹೋದಾಗ ಶಾಕೀರ್ ಅಂಗಡಿಯಲ್ಲಿದ್ದ ಚಾಕುವಿನಿಂದ ಇಬ್ಬರಿಗೂ ಇರಿದಿದ್ದಾನೆ.
ಭೀಮೇಶ್‍ರಿಗೆ ಅಂಗಡಿ ಮಾಲೀಕ ಅಜೀಮ್ ಹಲ್ಲೆ ಮಾಡಿದ್ದಾರೆ ಎಂದು ತಪ್ಪು ತಿಳಿದು ಭೀಮೇಶ್ ಕಡೆಯವರು ಅಜೀಮ್ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿದ ಆರೋಪಿ ಶಾಕೀರ್‍ನನ್ನ ಸದ್ಯಕ್ಕೆ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.