ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಅಬಕಾರಿ ಸುಂಕ ಏರಿಕೆ ಮಾಡಿದರೂ ಗ್ರಾಹಕರ ಮೇಲೆ ಯಾವುದೇ ಹೊರೆ ಇಲ್ಲ.
ತೈಲ ಕಂಪನಿಗಳ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ.
PSU Oil Marketing Companies have informed that there will be no increase in retail prices of #Petrol and #Diesel, subsequent to the increase effected in Excise Duty Rates today.#MoPNG
— Ministry of Petroleum and Natural Gas #MoPNG (@PetroleumMin) April 7, 2025
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ.
ಡೊನಾಲ್ಡ್ ಟ್ರಂಪ್ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.
ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್ (159 ಲೀಟರ್) ಬೆಲೆ ಸುಮಾರು 10 ಡಾಲರ್(ಅಂದಾಜು 850 ರೂ.) ಇಳಿಕೆಯಾಗಿದೆ.
ತೈಲ ಮತ್ತು ಅನಿಲ ವಲಯವನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದ್ದರೂ, ಹಣದುಬ್ಬರದ ಕಳವಳ, ಆರ್ಥಿಕ ಹಿಂಜರಿತ ಭೀತಿ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿವಾದಗಳು ತೀವ್ರಗೊಂಡಿರುವುದರಿಂದ ಬೆಲೆ ಇಳಿಕೆಯಾಗಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ.
ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250 ರೂ.) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್ ದರ 7% ಇಳಿಕೆಯಾಗಿ 59.34 ಡಾಲರ್ (ಅಂದಾಜು 5,090 ರೂ.)ತಲುಪಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ ದಿನಕ್ಕೆ 4,11,000 ಬ್ಯಾರೆಲ್‌ಗಳನ್ನು (bpd) ತೈಲ ಉತ್ಪಾದನೆ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ಧರಿಸಲಾಗಿದ್ದ 1,35,000 ಬಿಪಿಡಿಯಿಂದ ಹೆಚ್ಚು ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದು ಇದು ತೈಲ ಬೆಲೆ ಕುಸಿಯಲು ಕಾರಣವಾಗಿದೆ.