ಮುಸ್ಲಿಂ ಕುಟುಂಬದ ಆಸ್ತಿ ವಿವಾದ – ವಿಚಾರಣೆ ವೇಳೆ ಏಕರೂಪ ನಾಗರೀಕ ಸಂಹಿತೆ ಅಗತ್ಯ ಎಂದ ಹೈಕೋರ್ಟ್

Public TV
2 Min Read
HIGHCOURT

ಬೆಂಗಳೂರು: ಸಂವಿಧಾನದ ಮೂಲ ತತ್ವಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಅಗತ್ಯವಾಗಿದೆ ಎಂದು ಹೈಕೋರ್ಟ್ (High Court) ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಸ್ಲಿಂ ಕುಟುಂಬವೊಂದರ ಆಸ್ತಿ ಪಾಲು ದಾವೆಯೊಂದಕ್ಕೆ (Property Dispute) ಸಂಬಂಧಿಸಿದಂತೆ, ಬೆಂಗಳೂರಿನ ವಿವೇಕ ನಗರದ ಸಮೀವುಲ್ಲಾ ಖಾನ್ ಸೇರಿ ಹಲವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾಯಮೂರ್ತಿ ಹಂಚಾಟಿ ಸಂಜೀವ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ಈ ಅಂಶವನ್ನು ಪ್ರತಿಪಾದಿಸಿದೆ.

ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರಷ್ಟೇ ಸಮಾನ ಪಾಲು ಇಲ್ಲ. ಹೀಗಾಗಿ ದೇಶಾದ್ಯಂತ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಜಾರಿ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಬೇಕು. ಏಕರೂಪ ನಾಗರೀಕ ಸಂಹಿತೆ ಜಾರಿಯಿಂದ ಮಹಿಳೆಯರಿಗೆ ನ್ಯಾಯ ದೊರಕುತ್ತದೆ. ಮಹಿಳೆಯರ ಘನತೆ ಹೆಚ್ಚಾಗಿ ಎಲ್ಲರಂತೆ ಸಹಬಾಳ್ವೆ ನಡೆಸಬಹುದಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

uniform civil code 1 1

ಉತ್ತರಾಖಂಡ ಮತ್ತು ಗೋವಾ ಸರ್ಕಾರಗಳು ಈಗಾಗಲೆ ಯುಸಿಸಿ ಜಾರಿಗೊಳಿಸಿವೆ. ಈ ತೀರ್ಪಿನ ಪ್ರತಿಗಳನ್ನು ಕೇಂದ್ರ ಕಾನೂನು ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿಕೊಡುವಂತೆ ರಿಜಿಸ್ಟ್ರಾರ್ ಜನರಲ್‍ಗೆ ನ್ಯಾಯಾಲಯ ಸೂಚಿಸಿದೆ.

ಏನಿದು ಪ್ರಕರಣ?
ಅಬ್ದುಲ್‌ ಬಷೀರ್‌ ಖಾನ್‌ ಎಂಬವರು ಹಲವು ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಗಳನ್ನು ಬಿಟ್ಟು ನಿಧನರಾಗಿದ್ದ ಹಿನ್ನೆಲೆಯಲ್ಲಿ ಉದ್ಭವಿಸಿದ್ದ ಆಸ್ತಿ ವಿವಾದದ ವಿಚಾರಣೆಯ ವೇಳೆ ನ್ಯಾಯಾಲಯ ಈ ಮೇಲಿನ ಅಂಶಗಳನ್ನು ಉಲ್ಲೇಖಿಸಿದೆ.

ಬಷೀರ್‌ ನಿಧನ ಬಳಿಕ ಪುತ್ರಿ ಶಹನಾಜ್‌ ಬೇಗಂ ಆಸ್ತಿ ಹಂಚಿಕೆ ಸಂದರ್ಭದಲ್ಲಿ ತನ್ನನ್ನು ಕಾನೂನಿಗೆ ವಿರುದ್ಧವಾಗಿ ಕೈಬಿಡಲಾಗಿದ್ದು, ಆಸ್ತಿಯಲ್ಲಿ ನ್ಯಾಯಬದ್ಧ ಹಕ್ಕು ನೀಡಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019ರಲ್ಲಿ ಬೆಂಗಳೂರಿನ ಸತ್ರ ನ್ಯಾಯಾಲಯವು ಒಟ್ಟು ಆಸ್ತಿಗಳ ಪೈಕಿ ಜಂಟಿ ಆಸ್ತಿಯಾಗಿರುವ ಆಕ್ಷೇಪಿತ ಮೂರು ಆಸ್ತಿಗಳಲ್ಲಿ ಬೇಗಂ ಅವರ ಕಾನೂನುಬದ್ಧ ಪ್ರತಿನಿಧಿಗಳು 1/5ನೇ ಭಾಗಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ಆದರೆ, ಇದನ್ನು ಬೇರೆ ಆಸ್ತಿಗಳಿಗೆ ಅನ್ವಯಿಸಿರಲಿಲ್ಲ. ಈ ತೀರ್ಪಿನಿಂದ ಅಸಂತುಷ್ಟರಾಗದ ಬಶೀರ್‌ ಅಹ್ಮದ್‌ ಅವರ ಇಬ್ಬರು ಪುತ್ರರಾದ ಸಮೀಉಲ್ಲಾ ಖಾನ್‌, ನೂರುಲ್ಲಾ ಖಾನ್‌ ಮತ್ತು ಪುತ್ರಿ ರಹತ್‌ ಜಾನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸಿರಾಜುದ್ದೀನ್‌ ಅವರು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ, ತಮ್ಮ ಆಸ್ತಿ ಪಾಲು ಹೆಚ್ಚಿಸಲು ಮತ್ತು ಹಿಂದಿನ ಆದೇಶದಲ್ಲಿ ಮಾರ್ಪಾಡು ಕೋರಿ ಆಕ್ಷೇಪಣೆ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಚಾರಣಾಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. ಇದೇ ವೇಳೆ ಸಿರಾಜುದ್ದೀನ್‌ ಸಲ್ಲಿಸಿದ್ದ ಆಕ್ಷೇಪಣೆಯನ್ನು ವಜಾಗೊಳಿಸಿದೆ.

Share This Article