ಮುಲ್ಲನ್‌ಪುರ: ಸತತ ಗೆಲುವಿನ ಓಟದಲ್ಲಿ ಮುನ್ನಗ್ಗುತ್ತಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಸೋಲಿನ ರುಚಿ ತೋರಿಸಿದೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಶನಿವಾರ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ 5೦ ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಇದು ರಾಜಸ್ಥಾನ್‌ಗೆ ಸತತ 2ನೇ ಗೆಲುವಾದ್ರೆ. ಪಂಜಾಬ್‌ಗೆ ಮೊದಲ ಸೋಲಾಗಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪಂಜಾಬ್‌ಗೆ 206ರನ್‌ಗಳ ಕಠಿಣ ಗುರಿಯನ್ನ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲಿಗೆ ಶರಣಾಯಿತು.
ರಾಜಸ್ಥಾನ ನೀಡಿದ್ದ ಗುರಿ ಬೆನ್ನಟ್ಟಿದ ಪಂಜಾಬ್ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ (ಪ್ರಿಯಾಂಶ್ ಆರ್ಯ) ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 50 ರನ್ ದಾಟುವುದರೊಳಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತು. ಪಂಜಾಬ್ ಪರ ನೆಹಾಲ್ ವಧೇರಾ 41 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ನೆರವಿಂದ 62 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 21 ಎಸೆತಗಳಲ್ಲಿ 1 ಸಿಕ್ಸರ್, 3 ಫೋರ್ ಹೊಡೆದು 30 ರನ್, ಪ್ರಭಸಿಮ್ರನ್ ಸಿಂಗ್ 16 ಎಸೆತಗಳಲ್ಲಿ 17 ರನ್ ಗಳಿಸಿದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್, ಸಂದೀಪ್ ಶರ್ಮಾ, ಮಹೇಶ್ ತೀಕ್ಷಣ ತಲಾ 2 ವಿಕೆಟ್, ಕುಮಾರ್ ಕಾರ್ತಿಕೇಯ, ವನಿಂದು ಹಸರಂಗ ತಲಾ 1 ವಿಕೆಟ್ ಉರುಳಿಸಿದರು
ಮೊದಲು ಬ್ಯಾಟ್ ಬೀಸಿದ ರಾಯಲ್ಸ್ಗೆ ಪವರ್‌ಪ್ಲೇನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ 53 ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 11ನೇ ಓವರ್ ತನಕ ಬ್ಯಾಟಿಂಗ್ 89 ರನ್ ಪೇರಿಸಿದರು. ಈ ಸಂದರ್ಭದಲ್ಲಿ ಫರ್ಗ್ಯುಸನ್ ಬೌಲಿಂಗ್ನಲ್ಲಿ 26 ಎಸೆತಗಳಲ್ಲಿ 38 ರನ್ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್ ಔಟಾದರು. ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದ ಯಶಸ್ವಿ ಜೈಸ್ವಾಲ್ ಸಂಜು ಸ್ಯಾಮ್ಸನ್ ಔಟಾದ ನಂತರ ಅಬ್ಬರಿಸಿ 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ಗಳ ಸಹಿತ 67 ರನ್ ಗಳಿಸಿ ಫರ್ಗ್ಯುಸನ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಪಂಜಾಬ್ ಬೌಲರ್ಗಳನ್ನ ಚೆಂಡಾಡಿದ ರಿಯಾನ್ ಪರಾಗ್, 25 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 43 ರನ್ಗಳಿಸಿದರು. ಶಿಮ್ರಾನ್ ಹೆಟ್ಮೈರ್ 12 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ಗಳಿಸಿದರೆ, ಧ್ರುವ್ ಜುರೆಲ್ 5 ಎಸೆತಗಳಲ್ಲಿ ಅಜೇಯ 13 ರನ್ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.
ಪಂಜಾಬ್ ಪರ ಫರ್ಗ್ಯುಸನ್ 2, ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.