ಚಿಕ್ಕಮಗಳೂರು: ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಊರಿನಿಂದಲೇ ಬಹಿಷ್ಕಾರ ಹಾಕಿದ್ದಲ್ಲದೇ ಜೊತೆಗೆ 6,000 ದಂಡ ವಿಧಿಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಮುಳ್ಳುವಾರೆ (Mulluvare) ಗ್ರಾಮದಲ್ಲಿ ನಡೆದಿದೆ.
ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಗ್ರಾಮದ ಭೈರಪ್ಪ ಎಂಬುವವರನ್ನು ಊರಿನಿಂದಲೇ ಬಹಿಷ್ಕಾರ ಹಾಕಿದ್ದಾರೆ. ಅದಲ್ಲದೇ ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ, ಮನೆಗೆ ಯಾರೂ ಹೋಗುವಂತಿಲ್ಲ, ತೋಟದ ಕೆಲಸಕ್ಕೂ ಹೋಗುವಂತಿಲ್ಲ. ಮಗನ ಮದುವೆಗೆ ಯಾರೂ ಹೋಗಿಲ್ಲ. ಯಾರಾದರೂ ಇದಕ್ಕೆ ವಿರೋಧವಾಗಿ ನಡೆದುಕೊಂಡರೆ ಅವರಿಗೂ 5,000 ದಂಡ. ಇದೀಗ ಗ್ರಾಮಸ್ಥರಿಂದ ಬಹಿಷ್ಕಾರಕ್ಕೊಳಪಟ್ಟಿರುವ ಭೈರಪ್ಪ ನ್ಯಾಯಕ್ಕಾಗಿ ಡಿಸಿ ಕಚೇರಿ, ಪೋಲಿಸ್ ಸ್ಟೇಷನ್ ಅಲೆಯುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು
ಭೈರಪ್ಪ ಅವರನ್ನು ಗ್ರಾಮಸ್ಥರು ಸೇರಿಕೊಂಡು ಮುಳ್ಳುವಾರೆ ಗ್ರಾಮದ ಮುಖಂಡರನ್ನಾಗಿಸಿದ್ದರು. ಮುಳ್ಳುವಾರೆ ಗ್ರಾಮದ ಪಕ್ಕದಲ್ಲಿರುವ ಕೆಸರಿಕೆ ಗ್ರಾಮದಲ್ಲಿ ಒಂದೇ ದಿನ ಮೂರು ಮದುವೆಯಾಗಿದ್ದವು. ಅಂದು ಅಡುಗೆ ಮಾಡಲು ಪಾತ್ರೆ ಸಮಸ್ಯೆಯಾಗಿದೆ ಎಂದು ಕೆಸರಿಕೆ ಗ್ರಾಮದವರು ಬಂದು ಪಾತ್ರೆ ಕೇಳಿದ್ದರು. ಅದಕ್ಕೆ ಭೈರಪ್ಪ ಕೊಟ್ಟಿದ್ದರು. ಗ್ರಾಮದ ಕಾರ್ಯಕ್ರಮಗಳಿಗೆ ಹಳ್ಳಿಗರು ಹಣ ಹಾಕಿ ತಂದಿರುವ ಪಾತ್ರೆಗಳನ್ನು ಪಕ್ಕದ ಹಳ್ಳಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ ಹಾಕಲಾಗಿದೆ. ಭೈರಪ್ಪ ಹೀಗೆ ಪಾತ್ರೆಗಳನ್ನ ಕೊಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೊಟ್ಟಿದ್ದರು. ಈಗ ಮಾತ್ರ ಬಹಿಷ್ಕಾರ ಹಾಕಿದ್ದಾರೆ. 6,000 ಸಾವಿರ ದಂಡ ಹಾಕಿ, ಭೈರಪ್ಪನವರ ಮನೆಗೆ ಯಾರೂ ಹೋಗದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಪಾತ್ರೆ ನೀಡಿದ್ದರು. ಆದರೆ ಅಂದು ತಪ್ಪಾಗಿರಲಿಲ್ಲ. ಈಗ ಪಾತ್ರೆ ನೀಡಿರುವುದು ತಪ್ಪಾಗಿದ್ದು, ಹರೀಶ್, ಪುಟ್ಟಸ್ವಾಮಿ, ಮಂಜುನಾಥ್, ಸತೀಶ್, ಗಿರೀಶ್ ಹಾಗೂ ಪುಟ್ಟಸ್ವಾಮಿ ಎಂಬ ಆರು ಜನರಿಗೆ ದಂಡ ವಿಧಿಸಿ, ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧಿಕಾರಿ ಹಾಗೂ ಆಲ್ದೂರು ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಎಸ್ಸಿ-ಎಸ್ಟಿ ದೌರ್ಜನ್ಯ ಸಮಿತಿ ಸಭೆ ದಿನ ಪತ್ನಿಗೆ ಹಾರ್ಟ್ ಆಪರೇಷನ್ ಆಗಿದ್ದ ಕಾರಣ ಹೋಗಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಭೈರಪ್ಪ ಬೇಡಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ತಿಂಗಳಲ್ಲಿ 70 ಸಲ ನನ್ನ ಲೊಕೇಶನ್ ತೆಗೆಸುತ್ತಾರೆ: ಎಸ್‌ಪಿ ಮುಂದೆ ರಾಯಚೂರು ಬಿಜೆಪಿ ಶಾಸಕ ಅಳಲು