– ದೆಹಲಿ ಕೋರ್ಟ್ ಜಡ್ಜ್ ಬಂಗ್ಲೆಯಲ್ಲಿ ಹಣ ಸಿಕ್ಕ ಬೆನ್ನಲ್ಲೇ ಮಹತ್ವದ ತೀರ್ಮಾನ
ನವದೆಹಲಿ: ನ್ಯಾಯಾಂಗದ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ (Supreme Court) ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು (Assets Declarations) ಮತ್ತು ನ್ಯಾಯಾಲಯದ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲು ಒಪ್ಪಿಕೊಂಡಿದ್ದಾರೆ. ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ನ್ಯಾಯಾಧೀಶರು ಏ.1 ರಂದು ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಸಲ್ಲಿಸಿದ್ದಾರೆ. ಈ ವಿವರಗಳನ್ನು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗುತ್ತದೆ. ನ್ಯಾಯಾಧೀಶರ ಆಸ್ತಿ ಘೋಷಣೆಗಳನ್ನು ಪ್ರಕಟಿಸಲು ನಿರ್ದಿಷ್ಟ ವಿಧಾನಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್
ನ್ಯಾಯಾಧೀಶರ ಒಡೆತನದ ಆಸ್ತಿಗಳ ಕುರಿತ ಪ್ರಶ್ನೆಗಳಿಗೆ ಕಾನೂನು ಸಚಿವಾಲಯ ಸಂಸತ್ತಿನಲ್ಲಿ ಉತ್ತರಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೇಂದ್ರ ಸರ್ಕಾರವು, ನ್ಯಾಯಾಧೀಶರ ಆಸ್ತಿಗಳ ಯಾವುದೇ ದಾಖಲೆಯನ್ನು ನಿರ್ವಹಿಸುತ್ತಿಲ್ಲ ಎಂದು ಮಾ.27ರಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿತ್ತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ತಮ್ಮ ಆಸ್ತಿ ವಿವರಗಳನ್ನು ಸಿಜೆಐಗೆ ಸಲ್ಲಿಸಬೇಕು ಎಂಬ ನಿಯಮವಿದೆ. ಇದನ್ನು ಬಹಿರಂಗ ಮಾಡಬೇಕು ಎಂಬ ಕಡ್ಡಾಯ ನಿಯಮವೇನು ಇಲ್ಲ. ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನ್ಯಾಯಮೂರ್ತಿಗಳ ಆಸ್ತಿ ಡಿಕ್ಲರೇಷನ್‌ಗಾಗಿ ಈಗಾಗಲೇ ಪ್ರತ್ಯೇಕ ಸೆಕ್ಷನ್ ಇದೆ. ಕಳೆದ ಕೆಲ ವರ್ಷಗಳಿಂದ ಯಾವುದೇ ಅಪ್‌ಡೇಟ್ ಇರಲಿಲ್ಲ.
ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ಯಶವಂತ್ ವರ್ಮಾ (Justice Yashwant Varma) ಅವರ ಅಧಿಕೃತ ನಿವಾಸದಲ್ಲಿ ಮಾ.14 ರಂದು ಅಗ್ನಿ ಅವಘಡ ಸಂಭವಿಸಿತ್ತು. ಅವಘಡದ ನಂತರ ಸುಟ್ಟಿದ್ದ ಕಂತೆ ಕಂತೆ ನಗದು ಹಣ ಪತ್ತೆಯಾಗಿತ್ತು ಎನ್ನಲಾಗಿದೆ. ಆದರೆ ನ್ಯಾ. ವರ್ಮಾ ನಾನು, ನನ್ನ ಕುಟುಂಬ ಯಾವುದೇ ಹಣ ಅಲ್ಲಿ ಇರಿಸಿಲ್ಲ ಎಂದು ಹೇಳಿಕೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ನ್ಯಾಯಾಧೀಶರ ಆಸ್ತಿ ಘೋಷಣೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಜಡ್ಜ್ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್ ಸಮಿತಿಯಿಂದ ತನಿಖೆ ಆರಂಭ