– ಗ್ಯಾರಂಟಿಗೆ ಹಣ ಹೊಂದಿಸಲು ಸರ್ಕಾರ ಬೆಲೆ ಏರಿಕೆ ಮಾಡ್ತಿದೆ ಎಂದು ಕಿಡಿ
ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಏಕಾಂಗಿ ಹೋರಾಟಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು(Suresh Babu) ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ನಡೆ ಸರಿಯಲ್ಲ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಇಂದಿನಿಂದ ಅಹೋರಾತ್ರಿ ಧರಣಿ ಮಾಡ್ತಿದೆ. ಆದರೆ ನಮ್ಮನ್ನ ಕರೆದಿಲ್ಲ. ಜೆಡಿಎಸ್‌ಗೆ(JDS) ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆ ಆಯ್ತು. ಈಗಲೂ ಹೀಗೆ ಆಗಿದೆ. ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇವೆ. ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ
ಮೊದಲಿಂದಲೂ ನಾವು ಸಮನ್ವಯ ಸಮಿತಿ ಮಾಡಿ ಎಂದು ಹೇಳ್ತಿದ್ದೇವೆ. ಒಟ್ಟಾಗಿ ಹೋರಾಟ ಮಾಡಿದರೆ ಪ್ರಬಲವಾಗಿ ಇರುತ್ತದೆ. ನಾವು ಒಟ್ಟಾಗಿ ಹೋರಾಟ ಮಾಡಿದರೆ ಸರ್ಕಾರಕ್ಕೆ ಭಯ ಇರುತ್ತದೆ. ನಮ್ಮ ಪಕ್ಷಕ್ಕೆ ಬಿಜೆಪಿ ಹೋರಾಟ ಬಗ್ಗೆ ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರಿಗೂ ಕೇಳಿದೆ ಯಾರಿಗೂ ಹೇಳಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಇಬ್ಬರು ಒಟ್ಟಾಗಿ ಹೋಗಬೇಕು. ಈ ನಿಟ್ಟಿನಲ್ಲಿ ಎರಡು ಪಕ್ಷಗಳು ಕೂತು ಮಾಡಬೇಕು ಎಂದರು.
ಸಮನ್ವಯದ ಕೊರತೆ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ರಾಜ್ಯ ನಾಯಕರು ಇದನ್ನ ಮಾಡುತ್ತಿದ್ದಾರೆ. ನಿಖಿಲ್, ಬಿಜೆಪಿ ಅವರು ಘೋಷಣೆ ಮಾಡಿದರು ಎಂದು ನಾವು ಹೋರಾಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ(Vijayendra) ಅವರು ನಾವು ಪ್ರತ್ಯೇಕ ಹೋರಾಟ ಅಂತ ಹೇಳಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ. ಎರಡು ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ಮಾಡೋದು ಸರಿಯಲ್ಲ. ಎರಡು ಪಕ್ಷದ ವರಿಷ್ಠರು ಇದರ ಬಗ್ಗೆ ಸಮನ್ವಯ ಮಾಡಬೇಕು. ಇಲ್ಲದೆ ಹೋದರೆ ಎರಡು ಪಕ್ಷಕ್ಕೆ ಸಮಸ್ಯೆ ಆಗುತ್ತದೆ. ರಾಜ್ಯಮಟ್ಟದಲ್ಲಿ ಹೊಂದಾಣಿಕೆ ಬಗ್ಗೆ ಮಾತಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ
ನಾವು ಎನ್‌ಡಿಎ ಅಂಗ ಪಕ್ಷ, ಅದನ್ನ ಬಿಜೆಪಿ ಅವರು ಅರ್ಥ ಮಾಡಿಕೊಳ್ಳಬೇಕು. ಸಂಬಂಧ ಕಿತ್ತು ಹೋಗೋಕೆ ಕ್ಷಣ ಮಾತ್ರ ಸಾಕು. ಆದರೆ ಒಟ್ಟಾಗಿ ಹೋಗೋದನ್ನ ರೂಢಿಸಿಕೊಳ್ಳಿ. ದೇವೇಗೌಡ, ಕುಮಾರಸ್ವಾಮಿ ಅವರು ಬಿಜೆಪಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ:
ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜನರು ವಿರೋಧ ಮಾಡುವುದಿಲ್ಲ ಎಂಬ ಭಾವನೆಗೆ ಈ ಸರ್ಕಾರ ಬಂದಿದೆ. ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡ್ತಿದ್ದಾರೆ. ಗ್ರಾಹಕರಿಗೆ ಹೊರೆ ಹಾಕುವ ಕೆಲಸ ಮಾಡ್ತಿದ್ದಾರೆ. ಹಾಲು, ನೀರು, ವಿದ್ಯುತ್ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ. ಈ ಸರ್ಕಾರ ಬಡವರ ಪರ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ
ಕಾಂಗ್ರೆಸ್ ಅವರು ಚುನಾವಣೆಯಲ್ಲಿ ಗೆಲ್ಲೋಕೆ ಗ್ಯಾರಂಟಿ ಘೋಷಣೆ ಮಾಡಿದ್ರು. ಮತ ಪಡೆಯೋಕೆ ಯೋಜನೆ ತಂದರು. ಇಂತಹ ವ್ಯವಸ್ಥೆ ಆಗಬಾರದು. ಸರ್ಕಾರದ ಹಣ ಪಕ್ಷದ ಕಾರ್ಯಕರ್ತರಿಗೆ ಕೊಡ್ತಿದ್ದಾರೆ. ಈ ಸರ್ಕಾರ ಅನೇಕ ಅವ್ಯವಹಾರ ಮಾಡ್ತಿದೆ. ಸರ್ಕಾರದ ನೆಲೆ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಲಿದೆ. ವರಿಷ್ಠರ ಜೊತೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡೋದಾಗಿ ತಿಳಿಸಿದರು.