ನವದೆಹಲಿ: ವಿಪಕ್ಷಗಳು ಮತ್ತು ಮುಸ್ಲಿಮರ (Muslims) ವಿರೋಧದ ನಡುವೆ ಲೋಕಸಭೆಯಲ್ಲಿ (Lokasabha) ಇಂದು ವಕ್ಫ್ ತಿದ್ದುಪಡಿ ಮಸೂದೆ (Waqf Act Amendment Bill ಮಂಡನೆ ಆಗಲಿದೆ. ಮಧ್ಯಾಹ್ನ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಲಿದ್ದಾರೆ.
ಮಸೂದೆಯನ್ನು ಎನ್‌ಡಿಎ (NDA) ಒಕ್ಕೂಟದ 298 ಸಂಸದರು ಬೆಂಬಲಿಸಿದ್ದಾರೆ. ಇಂದೆ ವೋಟಿಂಗ್ ನಡೆಯೋ ಸಾಧ್ಯತೆ ಹೆಚ್ಚಿರುವ ಕಾರಣ ಎನ್‌ಡಿಎಯ ಎಲ್ಲಾ ಸಂಸದರು ಕಡ್ಡಾಯವಾಗಿ ಕಲಾಪಕ್ಕೆ ಬರಬೇಕೆಂದು ಆಯಾ ಪಕ್ಷಗಳು ವಿಪ್ ಜಾರಿ ಮಾಡಿದೆ. ಇದೇ ರೀತಿ ಕಾಂಗ್ರೆಸ್ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಇಡೀ ‘ಇಂಡಿಯಾ ಒಕ್ಕೂಟ’ ವಕ್ಫ್ ಮಸೂದೆ ವಿರುದ್ಧ ಮತ ಚಲಾಯಿಸುತ್ತೆ: ಸಂಸದ ಪ್ರೇಮಚಂದ್ರನ್
ವಕ್ಫ್ ತಿದ್ದುಪಡಿ ಬಿಲ್‌ನಲ್ಲೇನಿದೆ?
ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ
* ಹಿಂದಿನ ಕಾನೂನು : ಸರ್ವೆಯನ್ನು ರಾಜ್ಯ ಸರ್ಕಾರ ನೇಮಿಸಿದ ಸರ್ವೆ ಆಯುಕ್ತರು ನಡೆಸ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು.
* ಹೊಸ ತಿದ್ದುಪಡಿ : ಸರ್ವೆಗಳನ್ನು ಡಿಸಿಗಳಿಗೆ ವರ್ಗಾಯಿಸಲಾಗಿದೆ. ಡಿಸಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ. ಇದನ್ನೂ ಓದಿ: ವಕ್ಫ್ ಬಿಲ್ ಮಂಡನೆ – ಬಿಲ್ ಪಾಸ್ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?
ವಕ್ಫ್ ಘೋಷಣೆಗೆ ಷರತ್ತುಗಳು
* ಹಿಂದಿನ ಕಾನೂನು: ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು.
* ಹೊಸ ತಿದ್ದುಪಡಿ: ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರ ನೀಡಲಾಗಿದೆ. ಇದರಿಂದ ದುರುಪಯೋಗ ತಡೆಗಟ್ಟುವ ಉದ್ದೇಶವಿದೆ.
ಮಹಿಳೆಯರಿಗೆ ಆಸ್ತಿ ಹಕ್ಕು
* ಹಿಂದಿನ ಕಾನೂನು: ಮಹಿಳೆಯರಿಗೆ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ನಿರ್ದಿಷ್ಟ ಉಲ್ಲೇಖ ಇರಲಿಲ್ಲ.
* ಹೊಸ ತಿದ್ದುಪಡಿ: ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣನೆ.
ವಕ್ಫ್ ಮಂಡಳಿಯ ರಚನೆ
* ಹಿಂದಿನ ಕಾನೂನು: ಕೇಂದ್ರ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ.
* ಹೊಸ ತಿದ್ದುಪಡಿ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು, ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯ. ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆ ತರಲಾಗಿದೆ. ಇದನ್ನೂ ಓದಿ: ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ
ಲೆಕ್ಕಪರಿಶೋಧನೆ
* ಹಿಂದಿನ ಕಾನೂನು: ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು.
* ಹೊಸ ತಿದ್ದುಪಡಿ: ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.
ಆಸ್ತಿ ನೋಂದಣಿ ಮತ್ತು ಪಾರದರ್ಶಕತೆ
* ಹಿಂದಿನ ಕಾನೂನು: ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯ ಮಿತಿ ಇರಲಿಲ್ಲ.
* ಹೊಸ ತಿದ್ದುಪಡಿ: ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯ. 6 ತಿಂಗಳೊಳಗೆ ವಿವರ ಸಲ್ಲಿಸಬೇಕು. ಪ್ರತಿ 5 ವರ್ಷಕ್ಕೊಮ್ಮೆ ಸರ್ವೆ ನಡೆಸಬೇಕು.