ಬಳ್ಳಾರಿ: ಇಡೀ ರಾಜ್ಯದಲ್ಲಿ ಅತಿದೊಡ್ಡ ಕೆಎಂಎಫ್ (KMF) ಹಾಲು ಒಕ್ಕೂಟ ಅಂದರೆ, ಅದು ರಾಬಕೊವಿ ಹಾಲು ಒಕ್ಕೂಟ. ಈ ಒಕ್ಕೂಟದ ವ್ಯಾಪ್ತಿಗೆ ಅನುಗುಣವಾಗಿ ಮೆಗಾ ಡೈರಿ (Mega Dairy) ನಿರ್ಮಾಣಕ್ಕೆ ಸರ್ಕಾರ ಸಚಿವ ಸಂಪುಟದಲ್ಲಿ ನೂರಾರು ಕೋಟಿ ರೂ. ಅನುದಾನ ಮೀಸಲಿಟ್ಟು ಘೋಷಣೆಯನ್ನೂ ಮಾಡಿದೆ. ಆದರೆ ಇದೀಗ ಇದೇ ಮೆಗಾ ಡೈರಿ ವಿಚಾರಕ್ಕೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಗೂ ಬಳ್ಳಾರಿ (Ballari) ಜಿಲ್ಲೆಯ ರೈತರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ಹೌದು, ಇಡೀ ರಾಜ್ಯದಲ್ಲಿ ಅತಿದೊಡ್ಡ ಹಾಗೂ ಹೆಚ್ಚು ವ್ಯಾಪ್ತಿ ಹೊಂದಿರುವ ಕೆಎಂಎಫ್ ಹಾಲು ಒಕ್ಕೂಟದ ಸಾಲಿಗೆ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ರಾಬಕೊವಿ ಹಾಲು ಒಕ್ಕೂಟ ಸೇರುತ್ತದೆ. ಹೀಗಾಗಿ ಸಿದ್ದರಾಮಯ್ಯ (Siddaramaiah) ಸರ್ಕಾರ ಬಳ್ಳಾರಿಯಲ್ಲಿ ಮೆಗಾ ಡೈರಿ ನಿರ್ಮಾಣಕ್ಕೆ ಬಜೆಟ್‌ನಲ್ಲೇ ಮಂಜೂರು ಮಾಡಿತ್ತು. ಇದನ್ನೂ ಓದಿ: ಕರಾವಳಿಯಲ್ಲಿ ಹೆಚ್ಚಿದ ಅಕ್ರಮ ಗೋಮಾಂಸ ಸಾಗಾಟ – ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ
ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಬೊಮ್ಮಾಯಿ ಸಿಎಂ ಇದ್ದಾಗಲೂ ಪ್ರಸ್ತಾಪ ಇತ್ತು. ಆದರೆ ಇದಕ್ಕೆ ಒಂದು ರೂಪರೇಷೆ ಕೊಟ್ಟಿದ್ದು ಸಿದ್ದು ಸರ್ಕಾರ. ಅದರ ಭಾಗವಾಗಿ ಬಳ್ಳಾರಿಯ ಕೊಳಗಲ್ ಹಾಗೂ ಶ್ರೀಧರದ ಗಡ್ಡೆ 2 ಕಡೆ ಜಾಗ ಮೀಸಲಿಡಲಾಗಿದೆ. ಕೊಳಗಲ್ ಸಮೀಪ 15 ಎಕ್ರೆ ಜಾಗ ಈಗಾಗಲೇ ಜಿಲ್ಲಾಡಳಿತ ಗುರುತು ಮಾಡಿದೆ. ಆದ್ರೆ ಇದೀಗ ಬಜೆಟ್‌ನಲ್ಲಿ ಮಂಜೂರಾಗಿದ್ದ ಬಳ್ಳಾರಿ ಮೆಗಾ ಡೈರಿ ಬೇರೆ ಕಡೆ ಶಿಫ್ಟ್ ಆಗುತ್ತಾ ಎನ್ನುವ ಸಂಶಯ ಶುರುವಾಗಿದೆ.
ಸ್ವಹಿತಾಸಕ್ತಿಗಾಗಿ ಬಳ್ಳಾರಿಗೆ ಬಂದಿರುವ ಮೆಗಾ ಡೈರಿಯನ್ನ ವಿಜಯನಗರ (Vijayanagara) ಜಿಲ್ಲೆಗೆ ಕೊಂಡೊಯ್ಯಲು ಭೀಮಾ ನಾಯ್ಕ್ ಹುನ್ನಾರ ಮಾಡುತ್ತಿದ್ದಾರೆ ಎಂದು ರೈತರು ಸಿಡಿದೆದ್ದಿದ್ದಾರೆ. ಡೈರಿ ಸ್ಥಾಪನೆ ವಿಚಾರದಲ್ಲಿ ಬಳ್ಳಾರಿಗೆ ಅನ್ಯಾಯ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮಹಳ್ಳಿ ಕ್ಷೇತ್ರದ ಮಾಜಿ ಶಾಸಕ ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷರಾಗಿರುವುದರಿಂದ ಡೈರಿಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಿರ್ಮಾಣ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಮೆಗಾ ಡೈರಿಯನ್ನ ಬಳ್ಳಾರಿಯಲ್ಲೇ ಮಾಡಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್ – ದೈತ್ಯ ಮಿಸೈಲ್ ಸಿದ್ಧಪಡಿಸಿದ ಇರಾನ್
ರಾಬಕೊವಿ ಹಾಲು ಒಕ್ಕೂಟಕ್ಕೆ ಪ್ರತೀ ದಿನ ವಿಜಯನಗರ ಜಿಲ್ಲೆಯಿಂದ 1.20-1.40 ಲಕ್ಷ ಲೀಟರ್, ಬಳ್ಳಾರಿ 8-10 ಸಾವಿರ ಲೀಟರ್, ರಾಯಚೂರು 28-30 ಲೀಟರ್ ಹಾಗೂ ಕೊಪ್ಪಳ ಜಿಲ್ಲೆಯಿಂದ 60-70 ಸಾವಿರ ಲೀಟರ್ ಹಾಲು ಬರುತ್ತದೆ. ಅತೀ ಕಡಿಮೆ ಹಾಲು ಬರುವುದು ಬಳ್ಳಾರಿ ಜಿಲ್ಲೆಯಿಂದ ಆದರೂ ಹೆಚ್ಚು ಹಾಲು ಮಾರಾಟ ಆಗುವುದು ಇದೇ ಬಳ್ಳಾರಿ ಜಿಲ್ಲೆಯಲ್ಲಿ. ದಿನಕ್ಕೆ 60-70 ಸಾವಿರ ಲೀಟರ್ ಹಾಲು ಬಳ್ಳಾರಿ ಜಿಲ್ಲೆಯಲ್ಲಿ ಮಾರಾಟ ಆಗುತ್ತದೆ. ಇದನ್ನೂ ಓದಿ: ಪತ್ನಿ ಕೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಹಂತಕ – ಕಾರಣ ಬಾಯ್ಬಿಡದ ಟೆಕ್ಕಿ
ಇದೇ ಕಾರಣಕ್ಕೆ ಬಳ್ಳಾರಿಯಲ್ಲಿ ಮೆಗಾ ಡೈರಿ ಮಾಡುವುದಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡಿ ಅನುದಾನವನ್ನೂ ಮೀಸಲಿಡಲಾಗಿದೆ. ಅಲ್ಲದೇ ಮೆಗಾ ಡೈರಿಗೆ ಕೆಎಂಆರ್‌ಸಿಯಿಂದ 86 ಕೋಟಿ ರೂ. ಬಿಡುಗಡೆ ಆಗಿದೆ. ಆದರೆ ಮೆಗಾ ಡೈರಿ ವಿಚಾರದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳುವುದೇ ಬೇರೆ. ಬಳ್ಳಾರಿಯಲ್ಲಿ ಮೆಗಾ ಡೈರಿ ನಿರ್ಮಾಣಕ್ಕೆ ನನ್ನದೇನೂ ವಿರೋಧ ಇಲ್ಲ. ಆದರೆ ಭೌಗೋಳಿಕವಾಗಿ ಎಲ್ಲಾ ಜಿಲ್ಲೆಗಳಿಗೆ ಅನುಕೂಲ ಆಗುವಂತೆ ಡೈರಿ ಮಾಡಬೇಕು. ಆಗ ಖರ್ಚು ವೆಚ್ಚ ತಗ್ಗಿಸಬಹುದು ಎನ್ನುತ್ತಲೇ ಅಡ್ಡಗೋಡೆ ಮೇಲೆ ದೀಪ ಇಡುತ್ತಿದ್ದಾರೆ.
ಒಟ್ಟಿನಲ್ಲಿ ಈ ಮೆಗಾ ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ಭೀಮಾ ನಾಯ್ಕ್ ಅವರ ನಡೆ ಇದೀಗ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ನಡುವೆ ಕಿಚ್ಚು ಹೊತ್ತಿಸಿದೆ. ಹೀಗಾಗಿ ಬಜೆಟ್‌ನಲ್ಲಿ ಘೋಷಣೆ ಆದಂತೆ ಆದಷ್ಟು ಬೇಗ ಬಳ್ಳಾರಿಯಲ್ಲೇ ಮೆಗಾ ಡೈರಿ ನಿರ್ಮಾಣ ಆಗುತ್ತಾ ಅಥವಾ ಪ್ರತಿಷ್ಠೆಗೆ ಬಿದ್ದು ಮತ್ತಷ್ಟು ವಿಳಂಬ ಆಗುತ್ತಾ ಎಂದು ಕಾದು ನೋಡಬೇಕಿದೆ.