ಈದ್-ಎ-ರಂಜಾನ್, ಕುತಬ್-ಎ-ರಂಜಾನ್, ಈದುಲ್ ಫಿತರ್ ಮೊದಲಾದ ಹೆಸರುಗಳಿಂದ ಪ್ರಸಿದ್ಧವಾದ ರಂಜಾನ್ (Ramzan Eid ) ಹಬ್ಬವು ಮುಸ್ಲಿಮರ (Muslims) ದೊಡ್ಡ ಹಬ್ಬ. ಹಿಜರಿ ಶಕೆಯ ಒಂಬತ್ತನೇ ತಿಂಗಳು ರಂಜಾನ್ ಆಗಿದೆ.
ಮುಸಲ್ಮಾನರ ಧಾರ್ಮಿಕ ಪಂಚಾಂಗ ಚಾಂದ್ರಮಾನ ತಿಂಗಳುಗಳ ಮೇಲೆ ಆಧಾರಗೊಂಡಿದೆ. ಒಂಭತ್ತನೇ ತಿಂಗಳಿಗೆ ರಂಜಾನ್ ಎಂದು ಹೆಸರು. ಈ ಒಂದು ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ.
ರಂಜಾನ್ ತಿಂಗಳಿನಲ್ಲಿಯೇ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ (Quran) ಪೂರ್ಣಗೊಂಡಿತು. ಆದ್ದರಿಂದ ಈ ರಾತ್ರಿಯನ್ನು ‘ಲೈಲತ್ ಉಲ್ ಖದಕ್’ ಅಥವಾ ಶಕ್ತಿರಾತ್ರಿ ಎಂದು ಕರೆಯುತ್ತಾರೆ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ, ನರಕದ ಬಾಗಿಲು ಮುಚ್ಚಿರುತ್ತದೆಂದೂ, ಸೈತಾನನ ಕಾಲಿಗೆ ಬೇಡಿ ಬೀಳುತ್ತದೆಂದೂ ನಂಬಿಕೆಯಿದೆ. ಇದನ್ನೂ ಓದಿ: ರಂಜಾನ್ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?
ರಂಜಾನ್ ಮಾಸದ ಕೊನೆಯಲ್ಲಿ ಚಂದ್ರದರ್ಶನವಾದ ನಂತರ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಷವ್ವಾಲ್ ತಿಂಗಳ ಮೊದಲನೆ ದಿನವು ಹೌದು. ಇಡೀ ರಂಜಾನ್ ತಿಂಗಳು ಉಪವಾಸ ಮಾಡಿದ ಮುಸ್ಲಿಮರು ಷವ್ವಾಲಿನ ಪ್ರಥಮ ದಿನ ಸ್ನಾನಮಾಡಿ, ಶುಭ್ರ ಬಟ್ಟೆ ತೊಟ್ಟು ಸುವಾಸನೆ ಹಚ್ಚಿಕೊಂಡು ಅಲ್ಲಾನನ್ನು ಸ್ಮರಿಸುತ್ತಾ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ.
ಈ ತಿಂಗಳನ್ನು ಉಪವಾಸದ ತಿಂಗಳೆಂದೇ ಕರೆಯಲಾಗುವುದು. ಈ ತಿಂಗಳಲ್ಲಿ ಕುರಾನ್ ಪಠಣ, ದೇವರಿಗೆ ಪ್ರಾರ್ಥನೆ ಸಲ್ಲಿಸುವುದು, ಮಸೀದಿಗಳಿಗೆ ಹೋಗುವುದು, ಇವುಗಳನ್ನು ತಪ್ಪದೇ ಮಾಡುತ್ತಾರೆ. ದಾನ ಹಾಗೂ ಪುಣ್ಯಕಾರ್ಯಗಳನ್ನು ಈ ಅವಧಿಯಲ್ಲಿ ಮುಸ್ಲಿಮರು ಮಾಡುತ್ತಾರೆ. ಗೃಹಸ್ಥನೂ ಬಡವರಿಗೆ ದಾನ ನೀಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ.
ರಂಜಾನ್ ಉಪವಾಸ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ ಮತ್ತು ಯಾವ ಸುಖವನ್ನೂ ಅನುಭವಿಸುವುದಿಲ್ಲ. ಈ ಅವಧಿಯಲ್ಲಿ ವಿವಾದಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಪವಿತ್ರ ರಂಜಾನ್ ಅವಧಿಯಲ್ಲಿ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಕೆಟ್ಟದಾಗುತ್ತದೆ ಎಂಬ ನಂಬಿಕೆಯಿದೆ.