ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

Public TV
2 Min Read
Operation Brahma

ನವದೆಹಲಿ: ಭೂಕಂಪದಿಂದ (Earthquake) ನಲುಗಿದ ಮ್ಯಾನ್ಮಾರ್‌ಗೆ (Myanmar) ಭಾರತ ʻಆಪರೇಷನ್ ಬ್ರಹ್ಮʼ (Operation Brahma) ಹೆಸರಿನಲ್ಲಿ ವಿಮಾನದ ಮೂಲಕ ರಕ್ಷಣಾ ಸಿಬ್ಬಂದಿ, ವೈದ್ಯರು ಹಾಗೂ ಅಗತ್ಯ ವಸ್ತುಗಳನ್ನು ರವಾನಿಸಿದೆ.

ಭೂಕಂಪದ ನಂತರ ಕಾರ್ಯಾಚರಣೆಗೆ ಎರಡು NDRF ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ 55 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಮ್ಯಾನ್ಮಾರ್‌ಗೆ ಮೊದಲು ನೆರವು ನೀಡಿದ ದೇಶ ಭಾರತ. ಮೊದಲಿಗೆ ಸೇನಾ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ 2 ವಿಮಾನಗಳು ಶೀಘ್ರ ತೆರಳಲಿವೆ. ರಕ್ಷಣಾ ಕಾರ್ಯಾಚರಣೆಗಾಗಿ 80 ಎನ್‌ಡಿಆರ್‌ಎಫ್ ಸಿಬ್ಬಂದಿ ತೆರಳಿದ್ದಾರೆ. ಮೂರನೇ ಎನ್‌ಡಿಆರ್‌ಎಫ್ ತಂಡವನ್ನು ಕೋಲ್ಕತ್ತಾದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ

ಭಾರತದಿಂದ 118 ಫೀಲ್ಡ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮತ್ತು 2 ನೌಕಾಪಡೆ ಹಡಗು ರವಾನೆ ಆಗಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಪರಿಹಾರ ಸಾಮಗ್ರಿಗಳಲ್ಲಿ ಟೆಂಟ್‌ಗಳು, ಬೆಡ್‌ಶೀಟ್‌ಗಳು, ಆಹಾರ ಸಾಮಾಗ್ರಿ, ನೀರು ಶುದ್ದೀಕರಣ ಉಪಕರಣಗಳು, ಸೌರದೀಪಗಳು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಿ130ಜೆ ಮಿಲಿಟರಿ ವಿಮಾನದ ಮೂಲಕ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತಲುಪಿಸಲಾಗಿದೆ. ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೋನ್‌ನ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೆ ಸರಬರಾಜಾದ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ.

ಭಾರೀ ಭೂಕಂಪದಿಂದ ಮ್ಯಾನ್ಮಾರ್‌ನಲ್ಲಿ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಥೈಲ್ಯಾಂಡ್ ಇದುವರೆಗೆ 10 ಸಾವುಗಳನ್ನು ಖಚಿತಪಡಿಸಿದೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ

Share This Article