ಯುಗಾದಿ (Ugadi) ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.
ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸವರ್ಷದ ಪ್ರಾರಂಭದ ದಿನ. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ್ಯ. ಈ ದಿನ ಶ್ರೀರಾಮ (Sri Rama) ರಾವಣನನ್ನು ಕೊಂದು ಅಯೋಧ್ಯೆಗೆ (Ayodhya) ಬಂದು ಪಟ್ಟಾಭಿಷೇಕನಾಗಿ ರಾಮರಾಜ್ಯವಾಳಲು ಆರಂಭಿಸಿದ ದಿನ. ಅಯೋಧ್ಯೆಯ ಪ್ರಜೆಗಳು ಸಂತೋಷಪಟ್ಟು, ಮನೆಯ ಮುಂದೆ ವಿಜಯ ಪತಾಕೆ ಹಾರಿಸಿದರು ಎಂದು ಪುರಾಣ ಕಥೆ ಹೇಳುತ್ತದೆ. ಈ ಕಾರಣಕ್ಕೆ ಹಬ್ಬದ ದಿನ ಮನೆಯ ಮುಂದೆ ರಂಗೋಲಿ ಹಾಕಿ ಬಾವುಟ ಹಾರಿಸಿ ನಲಿಯುವ ಪದ್ಧತಿ ಈಗಲೂ ಇದೆ. ಈ ಕಾರಣಕ್ಕೆ ಇದಕ್ಕೆ ಗುಡಿಪಾಡ್ಯ (ಗುಡಿ ಅಂದರೆ ಬಾವುಟ) ಎನ್ನುತ್ತಾರೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಗುಡಿಪಾಡ್ವವನ್ನು(Gudi Padwa) ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಯುಗಾದಿ ಶಕ್ತಿ ಉಪಾಸನೆಯ ಆರಂಭದ ದಿನ. ಈ ದಿನದಿಂದ ವಸಂತ ನವರಾತ್ರಿ (Vasant Navratri) ಅಥವಾ ಚೈತ್ರ ನವರಾತ್ರಿ ಆರಂಭ. ವರ್ಷಾದಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆಯಿದೆ. ಯುಗಾದಿಯ ದಿನ ಬೆಳಗಾಗೆದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು ಬೆಲ್ಲಗಳನ್ನು ತಿನ್ನಲಾಗುತ್ತದೆ. ಇದನ್ನೂ ಓದಿ: ಯುಗಾದಿ ವಿಶೇಷ – ಪಂಚಾಂಗ ಪಠಣ ಮಾಡೋದು ಯಾಕೆ?
ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳೂ ನಾಶವಾಗಿ ದೇಹ ವಜ್ರದೇಹಿಯಾಗುತ್ತದೆ. ಸಂಪತ್ತು ಉಂಟಾಗುತ್ತದೆ; ಆಯಸ್ಸು ವೃದ್ಧಿಯಾಗುತ್ತದೆ ಎಂದು ಎಂದು ಹೇಳುತ್ತದೆ ಆಯುರ್ವೇದ.
ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸುತ್ತಾರೆ. ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ದವಾಗಿ ಬರುತ್ತದೆ ಎಂಬ ನಂಬಿಕೆಯಿದೆ.