ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

Public TV
2 Min Read
Hotel Service

– ಗ್ರಾಹಕರೇ ಸ್ವಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು
– ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೂಚನೆ

ನವದೆಹಲಿ: ದೇಶದಾದ್ಯಂತ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂಬ ಮಹತ್ತರ ತೀರ್ಪನ್ನು ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಎತ್ತಿ ಹಿಡಿದಿದೆ.

ಹೋಟೆಲ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಧಿಸಲಾಗುತ್ತಿದ್ದ ಸೇವಾ ಶುಲ್ಕ ನಿಷೇಧಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 2019ರ ಕಾನೂನಿನ ಅನ್ವಯ ಈ ಹಿಂದೆ ಮಾರ್ಗಸೂಚಿ ಹೊರಡಿಸಿತ್ತು. ಆದರೆ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಆರ್‌ಆಐ) ಮತ್ತು ಫೆಡರೇಶನ್ ಆಫ್ ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಗಳು ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಇದನ್ನೂ ಓದಿ: 50 ಲಕ್ಷ ಹಾಕಿದ್ರೂ ಮತ್ತಷ್ಟು ಬೇಡಿಕೆ – ಸೈಬರ್‌ ವಂಚಕರ ಕಾಟ, ವೃದ್ಧ ದಂಪತಿ ಆತ್ಮಹತ್ಯೆ

ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಹೊರಡಿಸಿದ್ದ ಸೇವಾ ಶುಲ್ಕ ನಿಷೇಧ ಮಾರ್ಗಸೂಚಿ ಮತ್ತು ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ವಾದವನ್ನು ಆಲಿಸಿ ಅಂತಿಮವಾಗಿ ಸಿಸಿಪಿಎ (CCPA) ಹೊರಡಿಸಿದ ಮಾರ್ಗಸೂಚಿಯನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದೆ. ಅಲ್ಲದೇ, ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್‌ಗೆ ದಂಡ ಸಹ ವಿಧಿಸಿದೆ. ಇದನ್ನೂ ಓದಿ: ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

ಸ್ವಯಂ ಪ್ರೇರಣೆಯಿಂದ ಕೊಟ್ಟರಷ್ಟೇ ತೆಗೆದುಕೊಳ್ಳಿ:

ಹೈಕೋರ್ಟ್ ತೀರ್ಪಿನ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಹೈಕೋರ್ಟ್ ತೀರ್ಪಿನ ಅನ್ವಯ ಇನ್ನು ಮುಂದೆ ದೇಶದ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವಯಂ ಪ್ರೇರಣೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿದೆ. ಕೇಂದ್ರ ಗ್ರಾಹಕ ಸಚಿವಾಲಯ ಗ್ರಾಹಕರ ಹಿತರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ 2019ರ ಕಾನೂನಿನ ಅನ್ವಯ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸಿ ಮಾರ್ಗಸೂಚಿ ಹೊರಡಿಸಿತ್ತು. ಹೋಟೆಲ್, ರೆಸ್ಟೋರೆಂಟ್ ಸಂಘಟನೆಗಳು ದೆಹಲಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್ ಗ್ರಾಹಕರ ಪರ ತೀರ್ಪು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

ದೆಹಲಿ ಹೈಕೋರ್ಟ್ ಆದೇಶದಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಇನ್ನು ಮುಂದೆ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವ ಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು ಎಂದು ಸೂಚಿಸಿದರು.

Share This Article