ಮುಂಬೈ: ಬಿಸಿಸಿಐ (BCCI) 2024-25ನೇ ಸಾಲಿನ ಕೇಂದ್ರ ಗುತ್ತಿಗೆಯನ್ನು ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು, ಈ ಹಿಂದೆ ಗುತ್ತಿಗೆಯಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಇಶಾನ್ ಕಿಶನ್ (Ishan Kishan) ಮತ್ತೆ ಮರಳುವ ಸಾಧ್ಯತೆಯಿದೆ.
ಮಾ.29 ರಂದು ಗುವಾಹಟಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia) ಅವರು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ (Ajit Agarkar) ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ:ಇಂದು ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್ ಫೈಟ್ – ಚೆನ್ನೈ ಭದ್ರಕೋಟೆ ಛಿದ್ರ ಮಾಡಲು ಆರ್‌ಸಿಬಿ ಪ್ಲ್ಯಾನ್
ಬಿಸಿಸಿಐ ಮೂರು ದಿನಗಳ ಹಿಂದೆಯಷ್ಟೇ ಭಾರತ ಮಹಿಳಾ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಶೀಘ್ರದಲ್ಲೇ ಪುರುಷ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. ಕಳೆದ ವರ್ಷ 2023-24 ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಹೊರಗುಳಿದಿದ್ದರು.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಗೆದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರ ರನ್‌ಗಳ ಕೊಡುಗೆ ಅಪಾರವಾಗಿತ್ತು. ಒಟ್ಟು 5 ಪಂದ್ಯಗಳಲ್ಲಿ 48.60 ರನ್‌ರೇಟ್‌ನಲ್ಲಿ 243 ರನ್ ಗಳಿಸಿದ್ದರು. ಹೀಗಾಗಿ ಶ್ರೇಯಸ್ ತಮ್ಮ ಗುತ್ತಿಗೆಯನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಇನ್ನೂ ಮಾ.22 ರಂದು ಪ್ರಾರಂಭವಾದ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಪರ ಆಡುತ್ತಿದ್ದು, ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯರಾಗಿ 106 ರನ್‌ಗಳಿಸಿದರು. ಆದರೆ ದೇಶೀಯ ಕ್ರಿಕೆಟ್ ಆಡದ ಹಿನ್ನೆಲೆಯಲ್ಲಿ ಗುತ್ತಿಗೆ ಕಳೆದುಕೊಂಡಿದ್ದ ಇಶಾನ್ ಕಿಶನ್ ಮರಳುತ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ.
ರೋಹಿತ್, ಜಡ್ಡು, ಕೊಹ್ಲಿ ಎ+ ಗ್ರೇಡ್‌ನಿಂದ ಔಟ್?
ಇನ್ನೂ ಭಾರತ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಹಾಗೂ ಜಡೇಜಾ ಮೂವರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಟಿ20, ಟೆಸ್ಟ್, ಏಕದಿನ ಮೂರೂ ಮಾದರಿಯಲ್ಲಿ ಆಡುವ ಕ್ರಿಕೆಟಿಗ ಎ+ ದರ್ಜೆಯಲ್ಲಿರುತ್ತಾರೆ. ಯಾವುದೇ ಒಂದು ಮಾದರಿಯಲ್ಲಿರದಿದ್ದರೂ ಪ್ರಮುಖ ಕ್ರಿಕೆಟಿಗರಾಗಿದ್ದರೂ ಎ ದರ್ಜೆಗೆ ಇಳಿಯುತ್ತಾರೆ. ಈ ಹಿನ್ನೆಲೆ ಕೇಂದ್ರ ಗುತ್ತಿಗೆಯಲ್ಲಿ ಅತ್ಯುನ್ನತ ಎ+ ದರ್ಜೆಯಲ್ಲಿ ಉಳಿದುಕೊಳ್ಳುತ್ತಾರಾ ಎಂದು ಕೂತುಹಲಕ್ಕೆ ಕಾರಣವಾಗಿದೆ. ಜೊತೆಗೆ ಬಿಸಿಸಿಐ ಮೂಲವೊಂದು ಮೂವರನ್ನು ಜಸ್ಪ್ರೀತ್ ಬುಮ್ರಾ ಜೊತೆಗೆ ಅತ್ಯುನ್ನತ ದರ್ಜೆಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದು, ಇಂಗ್ಲೆಂಡ್ (England) ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭಾರತವನ್ನು ರೋಹಿತ್ ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಭಾರತ ತಂಡಕ್ಕೆ ಯಶಸ್ವಿಯಾಗಿ ಮರಳಿದ್ದ ಹಾಗೂ ಕೇವಲ ಮೂರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆಲ್ಲುವಲ್ಲಿ ಅದ್ಭುತ ಪಾತ್ರ ವಹಿಸಿದ್ದ “ಮಿಸ್ಟರಿ ಸ್ಪಿನ್ನರ್” ವರುಣ್ ಚಕ್ರವರ್ತಿ (Varun Chakravarthy) ತಮ್ಮ ಚೊಚ್ಚಲ ಬಿಸಿಸಿಐ ಒಪ್ಪಂದವನ್ನು ಪಡೆಯಲು ಸಜ್ಜಾಗಿದ್ದಾರೆ.ಇದನ್ನೂ ಓದಿ:ಪೂರನ್ ಬೆಂಕಿ ಆಟಕ್ಕೆ ಸನ್‌ರೈಸರ್ಸ್ ಬರ್ನ್ – ಲಕ್ನೋಗೆ 5 ವಿಕೆಟ್‌ಗಳ ಜಯ