ಹಾಲಿನ ಬೆಲೆ 9 ರೂ. ಏರಿಕೆ – ಗ್ಯಾರಂಟಿ ಉಚಿತ, ಬೆಲೆ ಏರಿಕೆ ಖಚಿತ ಎಂದ ಸುರೇಶ್‌ ಕುಮಾರ್‌

Public TV
2 Min Read
Suresh Kumar

– ಮುಂದೆ ಸೇವಿಸುವ ಗಾಳಿಗೂ ದರ ಏರಿಸಬಹುದು
– ಬೆಲೆಏರಿಕೆ ಕಾಂಗ್ರೆಸ್ ಅಘೋಷಿತ ಗ್ಯಾರಂಟಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು (Milk Price) 9 ರೂ. ಏರಿಕೆ ಮಾಡಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ ಎಂದು ಬಿಜೆಪಿ ಶಾಸಕ ಮಾಜಿ ಸಚಿವ ಸುರೇಶ್‌ ಕುಮಾರ್‌ (Suresh Kumar) ಆಕ್ರೋಶ ಹೊರ ಹಾಕಿದ್ದಾರೆ.

ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹಧನ ನೀಡ ಬೇಕೆಂಬುದು ಒಪ್ಪಿತ ಮಾತು. ಹಾಗೆಂದ ಮಾತ್ರಕ್ಕೆ ಗ್ರಾಹಕರ ಜೇಬಿನಿಂದ ಕಿತ್ತು ಕೊಡುವುದು ಕಾಂಗ್ರೆಸ್‌ ಸರ್ಕಾರ ಹೇಳಿಕೊಳ್ಳುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ

 

ಪೋಸ್ಟ್‌ನಲ್ಲಿ ಏನಿದೆ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಆಗಸ್ಟ್ 2023 ರಲ್ಲಿ, ಹಾಲಿನ ಬೆಲೆ ಲೀಟರ್‌ಗೆ 3 ರೂ.ಗಳಷ್ಟು ಏರಿಕೆಯಾಯಿತು. ಅದಾದ ಬಳಿಕ 2024ರ ಜೂನ್‌ 26ಕ್ಕೆ ನಂದಿನಿಯ ಎಲ್ಲಾ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿತು. ಈಗ ಮತ್ತೊಂದು ಸುತ್ತಿನ ಹಾಲಿನ ಬೆಲೆ ಏರಿಕೆಯಾಗಿದೆ. ಏಪ್ರಿಲ್‌ 1 ರಿಂದ ಹಾಲಿನ ದರ ಲೀಟರ್‌ 4 ರೂಪಾಯಿ ಏರಿಕೆ ಘೋಷಣೆ ಮಾಡಿದೆ. ಇದನ್ನೂ ಓದಿ: ಸರ್ಕಾರವೇ ಹಣ ಕೊಡೋಕೆ ಪ್ರಿಂಟಿಂಗ್ ಮಿಷನ್ ಇಟ್ಟಿಲ್ಲ: ಸಚಿವ ರಾಜಣ್ಣ

ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೀಟರ್ ಹಾಲಿನ ಬೆಲೆಯಲ್ಲಿ 9 ರೂಪಾಯಿ ಏರಿಕೆ ಮಾಡಿದಂತಾಗಿದೆ. ಇನ್ನೊಂದು ವಿಚಾರವೇನೆಂದರೆ ಬರೀ ಹಾಲು ಮಾತ್ರವಲ್ಲ ಮೊಸರು ಕೂಡ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಿದೆ.

ಎಲ್ಲಾ ಪೋಷಕಾಂಶಗಳನ್ನು ಹೊಂದಿದ ಸಂಪೂರ್ಣ ಆಹಾರದಲ್ಲಿ ಮೊಟ್ಟೆಯನ್ನು ಹೊರತುಪಡಿಸಿದರೆ ಹಾಲಿಗೆ ಮೊದಲ ಅಗ್ರಸ್ಥಾನ. ಬಹುಶಃ ನಗರ ಪ್ರದೇಶದಲ್ಲಿ ಶ್ರೀಮಂತರು ಮಾತ್ರ ಹಾಲನ್ನು ಬಳಸಬೇಕೆ? ಬಡ ಮಧ್ಯಮ‌ ವರ್ಗ ಹಾಲನ್ನು ಬಳಸಬಾರದೇ? ಹಾಲು ಹಾಲಾಹಲವಾಗುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಈ ಸರ್ಕಾರ.

ಗ್ಯಾರಂಟಿ ಉಚಿತ, ಬೆಲೆ ಏರಿಕೆ ಖಚಿತ ಎಂಬ‌ ಈ ನಿಲುವು ರಾಜ್ಯದ ಆರ್ಥಿಕ ವ್ಯವಸ್ತೆ ದಿಕ್ಕೆಟ್ಟಿರುವ ದ್ಯೋತಕವಾಗಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ.

ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ಬೆಲೆ ಏರಿಕೆಯ ಬರೆಯಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಇಂದು ಹಾಲಿನ ದರ ಏರಿಕೆ ಮಾಡಿ ಮತ್ತೆ ಸುಲಿಗೆ ಮಾಡುವ ಕಾರ್ಯ ಮುಂದುವರೆಸಿದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಬೆಲೆಏರಿಕೆ ಕಾಂಗ್ರೆಸ್ ಅಘೋಷಿತ ಗ್ಯಾರಂಟಿ ಎಂಬುದು ಪ್ರತಿನಿತ್ಯ ರುಜುವಾತು ಆಗುತ್ತಿದೆ. ನಿಜಕ್ಕೂ ರಾಜ್ಯದ ಜನರ ಪಾಲಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟಿರುವ ಅತ್ಯಂತ ಅಮಾನವೀಯ ಹಾಗೂ ಖಂಡನೀಯ.

 

Share This Article