ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾ.ಯಶವಂತ್ ವರ್ಮಾ (Yashwant Varma) ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾ.14ರಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಕಂತೆ ಕಂತೆ ಹಣದ ರಾಶಿ ಪತ್ತೆಯಾಗಿತ್ತು ಎನ್ನಲಾಗಿದೆ. ಈ ವೀಡಿಯೊ ಸಹ ವೈರಲ್ ಆಗಿತ್ತು. ಈ ಸಂಬಂಧ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು, ತುಘಲಕ್ ರಸ್ತೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಫೋನ್ ಸೇರಿದಂತೆ 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್ ಸಮಿತಿಯಿಂದ ತನಿಖೆ ಆರಂಭ
ಅಗ್ನಿ ಅವಘಡ ಸಮಯದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದ ಸಿಬ್ಬಂದಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆಯೇ? ಈ ವೀಡಿಯೊಗಳನ್ನು ತಿರುಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ಎಲ್ಲಾ 8 ಪೊಲೀಸ್ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಮಾ.25ರಂದು ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಮೂವರು ಸದಸ್ಯರ ಸಮಿತಿ ಜಡ್ಜ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಇದೆಲ್ಲ ಬೆಳವಣಿಗೆಗಳ ನಡುವೆ ಅಗ್ನಿ ಅವಘಡದ ಸಮಯದಲ್ಲಿ ನಾನು ಮಧ್ಯಪ್ರದೇಶದಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿದ್ದರು. ನಾನು ಮತ್ತು ನಮ್ಮ ಕುಟುಂಬದ ಯಾವುದೇ ಸದಸ್ಯರು ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ಹೇಳುವ ಮೂಲಕ ಅವರು ಆರೋಪಗಳನ್ನು ನಿರಾಕರಿಸಿದ್ದರು. ಇದನ್ನೂ ಓದಿ: ನಗದು ಪತ್ತೆ ಕೇಸ್ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ