ಚಾಮರಾಜನಗರ: ಬೈಕ್‌ಗೆ ಈಚರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ನಡೆದಿದೆ.
ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಅಭಿಷೇಕ್ (23) ಹಾಗೂ ಅಭಿ (21) ಮೃತ ದುರ್ದೈವಿಗಳು. ಮಾದೇಶ್ (21) ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಗಿದೆ.
ಬಾಳೆಗೊನೆ ಕತ್ತರಿಸುವ ಕೆಲಸ ಮಾಡುತ್ತಿದ್ದ ಈ ಮೂವರು ಒಂದೇ ಬೈಕ್‌ನಲ್ಲಿ ಕೆಲಸ ಮುಗಿಸಿ ಹಿಂತಿರುಗುವಾಗ ಈಚರ್ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬಳಿಕ, ಪೊಲೀಸರು ಕಾರ್ಯಾಚರಣೆ ನಡೆಸಿ ಈಚರ್ ಪತ್ತೆಹಚ್ಚಿದ್ದಾರೆ. ಚಾಮರಾಜನಗರ ಟ್ರಾಫಿಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು
ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿ ಗೇಟ್ ಬಳಿ ಭಾನುವಾರ ನಡೆದಿದೆ. ರಾಘವಾಪುರ ಗ್ರಾಮದ ನಾಗಶೆಟ್ಟಿ (37) ಮೃತ ವ್ಯಕ್ತಿ. ಈತ ತನ್ನ ಬೈಕ್‌ನಲ್ಲಿ ಬೇಗೂರು ಕಡೆ ಹೋಗುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಕಾರು ವಿದ್ಯುತ್ ಕಂಬಕ್ಕೆ ಗುದ್ದಿ ನಿಂತಿದೆ.
ಕಾರು ಚಾಲಕ ಪರಾರಿಯಾಗಿದ್ದಾನೆ. ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಬೇಗೂರು ಆಸ್ಪತ್ರೆಗೆ ರವಾನಿಸಿ, ಅಪಘಾತ ಮಾಡಿದ ಕಾರು ಮತ್ತು ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.