ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ (Aurangzeb Tomb) ಮತ್ತೊಮ್ಮೆ ರಾಜಕೀಯ ಮತ್ತು ಸೈದ್ಧಾಂತಿಕ ಘರ್ಷಣೆಯ ವಿಷಯವಾಗಿದೆ. ನಾಗ್ಪುರದಲ್ಲಿ (Nagpur Violence) ಕೆಲ ದಿನಗಳ ಹಿಂದೆ ಭುಗಿಲೆದ್ದಿದ್ದ ಹಿಂಸಾಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಸೋಮವಾರ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹಲವಾರು ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಅನೇಕ ಜನರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ನಾಗ್ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಔರಂಗಜೇಬನ ಸಮಾಧಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ರಾಷ್ಟ್ರೀಯವಾದಿ ಗುಂಪುಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ‘ಕುರಾನ್’ ಸುಟ್ಟು ಹಾಕಲಾಗಿದೆ ಎಂಬ ವದಂತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು.
ಔರಂಗಜೇಬನ ಸಮಾಧಿ ಈಗ ಮುನ್ನೆಲೆಗೆ ಬಂದಿದ್ಯಾಕೆ? ಸಮಾಧಿ ತೆರವಿಗೆ ಒತ್ತಾಯ ಏಕೆ? ಹಿಂಸಾಚಾರದ ಹಿಂದಿನ ಕಾರಣಗಳೇನು?
ನಾಗ್ಪುರ ಪ್ರತಿಭಟನೆಗೆ ಕಾರಣ ಏನು?
ಬಾಲಿವುಡ್‌ನಲ್ಲಿ ಐತಿಹಾಸಿಕ ಸಿನಿಮಾ ‘ಛಾವಾ’ (Chhaava) ಫೆಬ್ರವರಿಯಲ್ಲಿ ರಿಲೀಸ್ ಆಯಿತು. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅವರು ಕ್ರಮವಾಗಿ ಛತ್ರಪತಿ ಶಿವಾಜಿ, ಮಹಾರಾಣಿ ಯೆಸುಬಾಯಿ ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಛಾವಾ ಸಿನಿಮಾವು ‘ಔರಂಗಜೇಬ್’ ವಿರುದ್ಧ ಶಿವಾಜಿಯ ಹೋರಾಟ ಮತ್ತು ಮೊಘಲ್ ಚಕ್ರವರ್ತಿಯಿಂದ ಮರಣದಂಡನೆಗೆ ಗುರಿಯಾಗುವ ಇತಿಹಾಸದ ಸನ್ನಿವೇಶವನ್ನು ಪ್ರತಿಬಿಂಬಿಸಿದೆ. ಸಿನಿಮಾದಲ್ಲಿನ ಭಾವನಾತ್ಮಕ ನಿರೂಪಣೆಯು ಔರಂಗಜೇಬನ ಸಮಾಧಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರೇರಣೆಯಾಗಿದೆ.
ಸಿನಿಮಾದ ನಿರೂಪಣೆ ಮತ್ತು ಯಶಸ್ಸು ಮಹಾರಾಷ್ಟ್ರದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ರಾಜ್ಯದ ಅತ್ಯಂತ ಪ್ರಸಿದ್ಧ ಐತಿಹಾಸಿಕ ವ್ಯಕ್ತಿಯೊಬ್ಬರನ್ನು ಗಲ್ಲಿಗೇರಿಸಿದ ಮೊಘಲ್ ಚಕ್ರವರ್ತಿಯ ಸಮಾಧಿಯನ್ನು ಸಂರಕ್ಷಿಸಬಾರದು ಎಂದು ಹಿಂದೂಪರ ಸಂಘಟನೆಗಳು ವಾದಿಸಿವೆ. ಕೊಲ್ಲಾಪುರದಲ್ಲಿ ಬಜರಂಗದಳ ಕಾರ್ಯಕರ್ತರು ಔರಂಗಜೇಬನ ಸಮಾಧಿಯ ಪ್ರತಿಕೃತಿಯನ್ನು ಸುತ್ತಿಗೆಯಿಂದ ಒಡೆದು ಸಾಂಕೇತಿಕವಾಗಿ ಪ್ರತಿಭಟಿಸಿದರು. ಸಮಾಧಿಯನ್ನು ತೆರವುಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ.
ಹಿಂದೂಪರ ಸಂಘಟನೆಗಳು ಹೇಳೋದೇನು?
ಔರಂಗಜೇಬ್ ಭಾರತೀಯ ಇತಿಹಾಸದಲ್ಲಿ ಅತ್ಯಂತ ದಬ್ಬಾಳಿಕೆಯ ಆಡಳಿತಗಾರರಲ್ಲಿ ಒಬ್ಬ. ದೇವಾಲಯಗಳ ನಾಶ, ಬಲವಂತದ ಮತಾಂತರಗಳು ಮತ್ತು ಮರಾಠ ಯೋಧರ ಮರಣದಂಡನೆಗೆ ಕಾರಣನಾಗಿದ್ದ ಎಂದು ಹಿಂದೂಪರ ಸಂಘಟನೆಗಳ ವಾದವಾಗಿದೆ. ಆತನ ಸಮಾಧಿಯನ್ನು ಸಂರಕ್ಷಿಸುವುದು ಮರಾಠ ಯೋಧರ ತ್ಯಾಗಕ್ಕೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ. ‘ಔರಂಗಜೇಬನ ಸಾಂಕೇತಿಕ ಸಮಾಧಿಯನ್ನು ಸಹ ನಾವು ಸಹಿಸಲಾಗದಿದ್ದರೆ, ಮಹಾರಾಷ್ಟ್ರದಲ್ಲಿ ನಿಜವಾದ ಸಮಾಧಿ ಅಸ್ತಿತ್ವದಲ್ಲಿರಲು ನಾವು ಏಕೆ ಬಿಡಬೇಕು? ಸರ್ಕಾರ ಅದನ್ನು ತಕ್ಷಣವೇ ತೆಗೆದುಹಾಕಬೇಕು’ ಎಂದು ಒತ್ತಾಯಿಸಿದ್ದಾರೆ. ಔರಂಗಾಬಾದ್ (ಈಗ ಛತ್ರಪತಿ ಸಂಭಾಜಿನಗರ), ಪುಣೆ ಮತ್ತು ನಾಸಿಕ್‌ನಲ್ಲಿಯೂ ಸಹ ಇದೇ ರೀತಿಯ ಬೇಡಿಕೆಗಳನ್ನು ಎತ್ತಲಾಗಿದೆ.
ಔರಂಗಜೇಬ್ ಬಗ್ಗೆ ಇತಿಹಾಸದಲ್ಲೇನಿದೆ?
ಮೊಘಲ್ ಸಾಮ್ರಾಜ್ಯದ 6ನೇ ಚಕ್ರವರ್ತಿಯಾಗಿದ್ದ ಔರಂಗಜೇಬ್ 1659-1707ರ ವರೆಗೆ 49 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ. ಸಾಮ್ರಾಜ್ಯ ವಿಸ್ತರಣಾವಾದಿಯಾಗಿದ್ದ. ಕಟ್ಟಾ ಮುಸ್ಲಿಮನಾಗಿದ್ದ ಔರಂಗಜೇಬ್ ಹಿಂದೂ ವಿರೋಧಿಯಾಗಿದ್ದ. ಅಕ್ಬರನ ಕಾಲದಲ್ಲಿದ್ದ ಜಾತ್ಯತೀತ ತತ್ವಗಳನ್ನು ಬದಿಗೆ ತಳ್ಳಿ ಆಡಳಿತ ನಡೆಸಿದ್ದ. ಈತನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆ ತಾಂಡವವಾಡುತ್ತಿತ್ತು. ಔರಂಗಜೇಬ್ ಉತ್ತಮ ಆಡಳಿತಗಾರನೂ ಆಗಿದ್ದ. ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯ ತನ್ನ ಉಚ್ಛಾçಯ ಸ್ಥಿತಿ ತಲುಪಿತ್ತು. ಈತನ ನಿಧನಾನಂತರ ಮೊಘಲ್ ಸಂತತಿ ತನ್ನ ಅವನತಿಯನ್ನು ಕಂಡಿತು.
ನನ್ನ ಸಮಾಧಿ ಇಲ್ಲೇ ಆಗಬೇಕು ಅಂತ ಹೇಳಿದ್ದ ಔರಂಗಜೇಬ್
ಔರಂಗಜೇಬ್ ತನ್ನ ಪೂರ್ವಜರಿಗಿಂತ ಭಿನ್ನವಾಗಿ ಆಡಳಿತ ನಡೆಸಲು ಮುಂದಾದ. ಮರಾಠರ ವಿರುದ್ಧ ಹೋರಾಡುತ್ತಾ, ಬೆಳೆಯುತ್ತಿರುವ ಶಕ್ತಿಯನ್ನು ಹತ್ತಿಕ್ಕಲು ಪ್ರಯತ್ನಿಸಿ ವಿಫಲನಾದ. ಸುದೀರ್ಘ ಯುದ್ಧವು ಮೊಘಲ್ ಖಜಾನೆಯನ್ನು ಬರಿದುಮಾಡಿತು. ಸಾಮ್ರಾಜ್ಯವನ್ನು ದುರ್ಬಲಗೊಳಿಸಿತು. ಮರಣಕ್ಕೂ ಮೊದಲು ಔರಂಗಜೇಬನು ಖುಲ್ದಾಬಾದ್‌ನಲ್ಲಿ, ಸೂಫಿ ಸಂತ ಶೇಖ್ ಜೈನುದ್ದೀನ್‌ನ ದರ್ಗಾದ ಬಳಿ ಸಮಾಧಿ ಮಾಡಬೇಕೆಂದು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದ. ತನ್ನ ಮಾರ್ಗದರ್ಶಿ ಶಕ್ತಿಗಳಾಗಿದ್ದ ಅಕ್ಬರ್ ಮತ್ತು ಹುಮಾಯೂನ್ ಅವರ ಭವ್ಯ ಸಮಾಧಿಗಳಿಗಿಂತ ನನ್ನ ಸಮಾಧಿ ಭಿನ್ನವಾಗಿರಬೇಕು ಎಂದು ಔರಂಗಜೇಬ್ ಸೂಚಿಸಿದ್ದ.
‘ಮಹಾ’ ಸಿಎಂ ಪ್ರತಿಕ್ರಿಯೆ ಏನು?
ಮಹಾರಾಷ್ಟ್ರ ಯಾರನ್ನಾದರೂ ವೈಭವೀಕರಿಸಿದರೆ ಅದು ಛತ್ರಪತಿ ಶಿವಾಜಿ ಮಹಾರಾಜರೇ ಆಗರಬೇಕೇ ಹೊರತು, ಔರಂಗಜೇಬ್ ಅಲ್ಲ. ಹಿಂದೂಗಳನ್ನು ದಬ್ಬಾಳಿಕೆ ಮಾಡಿದ ಮತ್ತು ನಮ್ಮ ಪ್ರೀತಿಯ ಛತ್ರಪತಿ ಸಂಭಾಜಿ ಮಹಾರಾಜರನ್ನು ಗಲ್ಲಿಗೇರಿಸಿದ ಆಡಳಿತಗಾರನ ಸಮಾಧಿ ನಮಗೆ ಬೇಕಾಗಿಲ್ಲ. ಯಾರಾದರೂ ಔರಂಗಜೇಬ್ ಅನ್ನು ವೈಭವೀಕರಿಸಲು ಪ್ರಯತ್ನಿಸಿದರೆ, ಅಂತಹ ಪ್ರಯತ್ನಗಳನ್ನು ನಾವು ಹೊಸಕಿ ಹಾಕುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಈ ವಿವಾದವು ಮಹಾರಾಷ್ಟ್ರದಲ್ಲಿ ರಾಜಕೀಯ ಸ್ವರೂಪಕ್ಕೆ ಕಾರಣವಾಗಿದೆ. ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವ ಬೇಡಿಕೆಗೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಬೆಂಬಲಿಸಿದರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಇದನ್ನು ವಿರೋಧಿಸಿವೆ.
ಕೋರ್ಟ್ ಮೆಟ್ಟಿಲೇರಿದ ಸಮಾಧಿ ವಿವಾದ
ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ಧ್ವಂಸಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ. ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಿಂದ ಈ ಸಮಾಧಿ ಹೆಸರನ್ನು ಕೈಬಿಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
2022ರಲ್ಲೂ ನಡೆದಿತ್ತು ಧ್ವಂಸ ಯತ್ನ
ಮಹಾರಾಷ್ಟ್ರ ಪೊಲೀಸರು ಔರಂಗಜೇಬ್ ಸಮಾಧಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ವಿಧ್ವಂಸಕತೆ, ಹಿಂಸಾಚಾರವನ್ನು ತಡೆಯಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಮಾಧಿಗೆ ಅಪಾಯ ಎದುರಾಗಿರುವುದು ಇದೇ ಮೊದಲಲ್ಲ. 2022ರ ಮೇ ತಿಂಗಳಲ್ಲಿ ಬಲಪಂಥೀಯ ಗುಂಪು ಸಮಾಧಿಯನ್ನು ಧ್ವಂಸಗೊಳಿಸಲು ಯತ್ನಿಸಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇದನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಮತ್ತೆ ತೆರೆಯಲಾಯಿತು. ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಲವು ಹಿಂಸಾಚಾರಗಳು ವರದಿಯಾಗಿವೆ. ಎರಡು ವರ್ಷಗಳ ಹಿಂದೆ, ಕೊಲ್ಲಾಪುರ ನಗರದ ಸಮೀಪವಿರುವ ಮುಸ್ಲಿಂ ಕುಟುಂಬದ ಮನೆಯನ್ನು ಸುಟ್ಟು ಹಾಕಲಾಗಿತ್ತು. ಕುಟುಂಬದ ಅಪ್ರಾಪ್ತ ಬಾಲಕ ಔರಂಗಜೇಬ್ ಅನ್ನು ವೈಭವೀಕರಿಸುವ ವೀಡಿಯೊವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಿದ್ದ. ಆಗ ಕೆಲವು ಗ್ರಾಮಸ್ಥರು ಕುಟುಂಬವನ್ನು ಬಹಿಷ್ಕರಿಸಲು ಮುಂದಾಗಿದ್ದರು. ಆದರೆ, ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಔರಂಗಜೇಬನ ಸಮಾಧಿಯ ಮೇಲಿನ ರಾಜಕೀಯ ಚರ್ಚೆಯು ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ. ಸದ್ಯಕ್ಕೆ, ಈ ವಿಷಯವು ಆಳವಾದ ಭಾವನಾತ್ಮಕ, ರಾಜಕೀಯ ಮತ್ತು ಮಹಾರಾಷ್ಟ್ರದ ಮರಾಠ ಪರಂಪರೆಯೊಂದಿಗೆ ಹೆಣೆದುಕೊಂಡಿದೆ. ‘ಛಾವಾ’ ಸಿನಿಮಾ ಮಹಾರಾಷ್ಟ್ರದಲ್ಲಿ ಹಿಂದೂ ರಾಷ್ಟ್ರೀಯವಾದಿ ಭಾವನೆಯನ್ನು ಪ್ರೇರೇಪಿಸಿದೆ. ಔರಂಗಜೇಬನ ಸಮಾಧಿ ವಿಚಾರವು ಮುಂದಿನ ದಿನಗಳಲ್ಲಿ ರಾಜಕೀಯ ಭಾಷಣದ ವಿಷಯವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.