ಬೆಂಗಳೂರು: ಬೇಸಿಗೆ ಕಾಲ ಬಂದುಬಿಟ್ಟಿದೆ, ತಾಪಮಾನ ಹೆಚ್ಚುತ್ತಿದ್ದಂತೆ ಬಿಸಿ ಗಾಳಿ ಮೈಗೆ ಅಪ್ಪಳಿಸುತ್ತಿದೆ, ಮಳೆ ಮಾಯವಾಗುತ್ತಿದೆ. ಈ ನಡುವೆಯೂ ಮರಗಿಡಗಳು (Trees), ಪರಿಸರದ ಮೇಲಿನ ದೌರ್ಜನ್ಯ ವಿಪರೀತವಾಗಿ ವಿನಾಶ ಕಾಲ ಶುರುವಾದಂತೆ ಕಾಣ್ತಿದೆ.
ಹೌದು. ಮರಗಿಡ ಬೆಳೆಸಿ, ಪರಿಸರ ಉಳಿಸಿ ಎಂದು ಸರ್ಕಾರ ಮತ್ತು ಸಂಘಟನೆಗಳು ಘೋಷಿಸುತ್ತವೆ. ಸಾರ್ವಜನಿಕರೂ ಮಾತನಾಡಿಕೊಳ್ಳುತ್ತಾರೆ. ಇದು ಕೇವಲ ಔಪಚಾರಿಕ ಸಮಾರಂಭಕ್ಕೆ, ಭಾಷಣಕ್ಕೆ ಸೀಮಿತವಾಗಿ ಮರೆತು ಹೋಗುತ್ತದೆ. ಆದರೆ, ವಾಸ್ತವದಲ್ಲಿ ಮರಗಳನ್ನು ಉಳಿಸುವ ಬದಲು ಉರುಳಿಸುವ ಕೆಲಸವೇ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಬೆಂಗಳೂರು ನಗರದಲ್ಲಿ 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು ಕೊಟ್ಟಿರುವುದೇ ಸಾಕ್ಷಿಯಾಗಿದೆ.
ಅಭಿವೃದ್ಧಿ, ಸುರಕ್ಷತೆ, ರಸ್ತೆ ಸಂಚಾರಕ್ಕೆ ಅಡಚಣೆ ಹೆಸರಲ್ಲಿ ಮರ ಕತ್ತರಿಸುವ ಸಂಸ್ಕೃತಿ ದಿನೇ ದಿನೇ ಹೆಚ್ಚುತ್ತಿದೆ. ಆದರೂ ಯಾರೂ ಕೇಳುವರಿಲ್ಲದೇ ಪರಿಸರ ಜಾಗೃತಿ ಬದಲು ದುರ್ಗತಿ ಎದುರಾಗುತ್ತಿದೆ. ಇದೀಗ ಆಹಾರಸೌಧ ಕಟ್ಟಡ ನೆಪದಲ್ಲಿ ಸರ್ಕಾರದಿಂದಲೇ ಮರಗಳ ಮಾರಣಹೋಮ ಮಾಡುವ ಕೆಲಸ ನಡೆಯುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ಅರಣ್ಯ ಇಲಾಖೆ ಜಾಗದಲ್ಲಿ ಆಹಾರ ಸೌಧ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಬೆಂಗಳೂರಿನ ಅಲಿಅಸ್ಕರ್ ರಸ್ತೆಯಲ್ಲಿ 100 ವರ್ಷಗಳಷ್ಟು ಹಳೆಯದಾದ 23 ಮರಗಳಿಗೆ ಕೊಡಲಿ ಏಟು ನೀಡಿದೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲೇ ಕಾಂಕ್ರೀಟ್ ಕಾಡಿನಂತಾಗಿರುವ ಬೆಂಗಳೂರಿನಲ್ಲಿ ಮರಗಳನ್ನು ಕಡಿದು ಇನ್ನಷ್ಟು ಅಪಾಯ ತಂದೊಡ್ಡಬೇಡಿ ಎಂದು ಜನರು ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.