18ನೇ ಐಪಿಎಲ್ (IPL 2025) ಆವೃತ್ತಿಗೆ ಇನ್ನು 3 ದಿನಗಳಷ್ಟೇ ಬಾಕಿಯಿದ್ದು, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಈ ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಮತ್ತೊಂದೆಡೆ ಬೌಲರ ಕಮಾಲ್, ಕ್ಯಾಪ್ಟನ್‌ಗಳ ಚಮತ್ಕಾರ ಎಲ್ಲವೂ ಕಣ್ಣಿಗೆ ಹಬ್ಬ.
ಟಿ20 ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್. ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ 18 ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ಕೆಲವೊಮ್ಮೆ ಪಂದ್ಯದ ದಿನಕ್ಕನೇ ಬದಲಿಸುವ ಬೌಲರ್‌ಗಳು, ಕೊನೆಯಲ್ಲಿ ರಣತಂತ್ರ ರೂಪಿಸಿ ಎದುರಾಳಿಗಳನ್ನು ಕಟ್ಟಿಹಾಕುವ ಕ್ಯಾಪ್ಟನ್‌ಗಳು ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂತಹ ಅದ್ಭುತ ಕ್ಷಣಗಳಿಗೆ 18ನೇ ಆವೃತ್ತಿಯ ಐಪಿಎಲ್ ಕೂಡ ಸಾಕ್ಷಿಯಾಗಲಿದೆ.
ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್, ಒಂದೇ ಋತುವಿನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್, ನಾಯಕನಾಗಿ ಅತಿ ಹೆಚ್ಚು ಗೆಲುವು, ಹೆಚ್ಚು ವಿಕೆಟ್, ಕಡಿಮೆ ಸ್ಕೋರ್ ಗಳಿಸಿದ ತಂಡ ಸೇರಿದಂತೆ ಐಪಿಎಲ್‌ನಲ್ಲಿ ಮುರಿಯಲು ಕಷ್ಟಕರವಾದ ದಾಖಲೆಗಳ ಪಟ್ಟಿಇಂತಿದೆ. ಇದನ್ನೂ ಓದಿ: IPL 2025: ಆರೆಂಜ್, ಪರ್ಪಲ್ ಕ್ಯಾಪ್ ವಿನ್ನರ್ಸ್ ಇವರೇ.. – ಶಾನ್ ಮಾರ್ಷ್‌ನಿಂದ ಕಿಂಗ್ ಕೊಹ್ಲಿ ವರೆಗೆ
ಕ್ರಿಸ್‌ಗೇಲ್ ತೂಫಾನ್ ಶತಕ
ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರ ಈ ದಾಖಲೆ ಮುರಿಯುವುದು ಇಂದಿಗೂ ಅಸಾಧ್ಯವಾಗಿಯೇ ಉಳಿದಿದೆ. ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜನ ಹೆಸರಿನಲ್ಲಿದೆ. 2013ರ ಏಪ್ರಿಲ್ 23ರಂದು ಟೂರ್ನಿಯ 31ನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಅವರ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ, 17 ಸಿಕ್ಸರ್ ಗಳಿದ್ದವು. ಇಂದಿಗೂ ಸಹ ಗೇಲ್ ಅವರ ಈ ದಾಖಲೆ ಸಮೀಯ ಸುಳಿಯಲೂ ಯಾರಿಂದಲೂ ಸಾಧ್ಯವಾಗಿಲ್ಲ.
ರನ್ ಮಿಷಿನ್ ಕೊಹ್ಲಿ
ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು. ಯಾವೊಬ್ಬ ಬ್ಯಾಟರ್ ಕೂಡ ಈ ದಾಖಲೆಯ ಸಮೀಪಕ್ಕೂ ಸುಳಿದಿಲ್ಲ. ಆ ಋತುವಿನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿ ಮತ್ತು 152.03 ಸ್ಟೈಕ್ ರೇಟ್‌ನಲ್ಲಿ ಇಷ್ಟು ರನ್ ಸಿಡಿಸಿದ್ದರು. ಅವರು ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದರು. ಕೊಹ್ಲಿ ನಂತರ 2ನೇ ಸ್ಥಾನದಲ್ಲಿ ಶುಭಮನ್ ಗಿಲ್ ಇದ್ದಾರೆ. 2023ರ ಆವೃತ್ತಿಯಲ್ಲಿ ಗಿಲ್ 890 ರನ್ ಗಳಿಸಿದ್ದರು. ಇದನ್ನೂ ಓದಿ: IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್!
ನಾಯಕನಾಗಿ ದಾಖಲೆ ಬರೆದ ಕೂಲ್ ಕ್ಯಾಪ್ಟನ್
ಐಪಿಎಲ್ ಇತಿಹಾಸದಲ್ಲೇ ನಾಯಕನಾಗಿ ಅತಿ ಹೆಚ್ಚು ದಾಖಲೆ ಕಂಡ ಆಟಗಾರ ಲೆಜೆಂಡ್ ಎಂ.ಎಸ್ ಧೋನಿ. ಈ ದಾಖಲೆಯನ್ನೂ ಮುರಿಯುವುದು ಸುಲಭದ ಮಾತಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಧೋನಿ 133 ಪಂದ್ಯಗಳಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. 91 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದನ್ನೂ ಓದಿ: IPL 2025 | 10 ತಂಡಗಳ ನಾಯಕರ ಹೆಸರು ಫೈನಲ್ – 9 ಮಂದಿ ಭಾರತೀಯರದ್ದೇ ಆರ್ಭಟ
ಸ್ಪಿನ್ ಮಾಂತ್ರಿಕ ಚಹಲ್
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಯುಜೇಂದ್ರ ಚಹಲ್ ಅವರದ್ದಾಗಿದೆ. ಚಹಲ್ ಒಟ್ಟು 205 ವಿಕೆಟ್ ಕಬಳಿಸಿದ್ದು, ಇದು ಈವರೆಗೆ ಸಾರ್ವಕಾಲಿಕ ದಾಖಲೆಯಾಗಿಯೇ ಉಳಿದಿದೆ. ಇಷ್ಟು ವಿಕೆಟ್ ಪಡೆಯೋದಕ್ಕಾಗಿ 159 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 40ಕ್ಕೆ 5 ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. ಐಪಿಎಲ್ 2025 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿರುವ ಚಹಲ್ ತಮ್ಮ ವಿಕೆಟ್ ಬೇಟೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: IPL 2025 | ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ವೀರರು ಇವರೇ…
ಅತೀ ಕಡಿಮೆ ರನ್‌ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದ 5 ತಂಡಗಳು
* ಆರ್‌ಸಿಬಿ – 49 ರನ್ – ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ – 2017
* ರಾಜಸ್ಥಾನ್ ರಾಯಲ್ಸ್ – 58 ರನ್ – ಆರ್‌ಸಿಬಿ ವಿರುದ್ಧ – 2009
* ರಾಜಸ್ಥಾನ ರಾಯಲ್ಸ್ – 59 ರನ್ – ಆರ್‌ಸಿಬಿ ವಿರುದ್ಧ – 2023
* ಡೆಲ್ಲಿ ಡೇರ್ ಡೆವಿಲ್ಸ್ – 66 ರನ್ – ಮುಂಬೈ ಇಂಡಿಯನ್ಸ್ ವಿರುದ್ಧ – 2017
* ಡೆಲ್ಲಿ ಡೇರ್ ಡೆವಿಲ್ಸ್ – 67 ರನ್ – ಪಂಜಾಬ್ ಕಿಂಗ್ಸ್ ವಿರುದ್ಧ – 2017