ಕೊಪ್ಪಳ: ಬೇಸಿಗೆ ಮುನ್ನವೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದಲೇ ಬಿಸಿಲು ಜೋರಾಗಿದ್ದು, ಜನ ಹೈರಾಣಾಗುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ (Heat Stroke) ವಾರ್ಡ್ ಆರಂಭಿಸಲಾಗಿದೆ.
ಕೊಪ್ಪಳ (Koppal) ಸೇರಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಬಿಸಿಲುನಾಡು ಎಂದೇ ಕರೆಯುತ್ತಾರೆ. ಈ ಭಾಗದಲ್ಲಿ ಬಿಸಿಲು ಈಗಾಗಲೇ 37 ಡಿಗ್ರಿ ತಲುಪಿದೆ. ಗಂಗಾವತಿ, ಕಾರಟಗಿ ಭಾಗದಲ್ಲಿ 38 ಹಾಗೂ 39 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದೆ. ಬಿಸಿಲು ಈಗಾಗಲೇ ಜನರನ್ನು ಕಂಗಾಲಾಗಿಸಿದ್ದು, ಹಲವರು ಬಿಸಿಲಿನಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಲಾಗಿದೆ.ಇದನ್ನೂ ಓದಿ: ಪಿಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್
ಹತ್ತು ಬೆಡ್‌ಗಳ ಪ್ರತ್ಯೇಕ ವಾರ್ಡ್ನ್ನು ಆರಂಭಿಸಲಾಗಿದ್ದು, ಅಲ್ಲಿ ಓರ್ವ ತಜ್ಞ ವೈದ್ಯರು, ಇಬ್ಬರು ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಸ್ವಸ್ಥರಿಗೆ ಹೀಟ್ ಸ್ಟ್ರೋಕ್‌ಗೆ ಸಂಬಂಧಿಸಿದ ಚಿಕಿತ್ಸೆ ನೀಡಲು ಬೇಕಾದ ಮೆಡಿಸಿನ್, ಡ್ರಿಪ್, ಸೇರಿದಂತೆ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ.
ತಾಪಮಾನದಿಂದಾಗಿ ಯಾರಾದರೂ ಆಸ್ಪತ್ರೆಗೆ ಬಂದರೆ, ಅವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ ಅವರನ್ನು ಹೀಟ್ ಸ್ಟ್ರೋಕ್ ವಾರ್ಡ್ಗೆ ಶಿಪ್ಟ್ ಮಾಡಿ, ಚಿಕಿತ್ಸೆ ನೀಡಲಾಗುವುದು. ಈ ಕುರಿತು ವೈದ್ಯರು ಮಾಹಿತಿ ನೀಡಿದ್ದು, ಹೀಟ್ ಸ್ಟ್ರೋಕ್ ನಿಯಂತ್ರಣಕ್ಕಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಬೇಕು. ನೀರು, ಮಜ್ಜಿಗೆ ಸೇರಿದಂತೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಬೇಕು. ನೆರಳಿನ ವ್ಯವಸ್ಥೆಯಿದ್ದಾಗ ಮಾತ್ರ ನೀವು ಬಿಸಿಲಿನಲ್ಲಿ ಕೆಲಸ ಮಾಡಬಹುದು. ಮನೆಯಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಹೀಟ್ ಸ್ಟ್ರೋಕ್‌ನಿಂದ ಪಾರಾಗಬಹುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ – ಸಿದ್ದರಾಮಯ್ಯ ಭರವಸೆ