ಮುಂಬೈ: ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ (PM Modi) ಅವರ ಬಳಿ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಮುಂಬೈಗೆ ಹಿಂದಿರುಗಿದ ಬೆನ್ನಲ್ಲೇ ಠಾಕ್ರೆ ನಿರ್ಧಾರ ಬದಲಿಸಿದರು ಎಂದು ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಆರೋಪಿಸಿದ್ದಾರೆ.
ಉದ್ಧವ್ ಠಾಕ್ರೆ (Uddhav Thackeray) ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ‘ದಯವಿಟ್ಟು ನನ್ನನ್ನು ಕ್ಷಮಿಸಿ… ನಾವು ಮತ್ತೆ ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ’ ಎಂದು ಹೇಳಿದ್ದರು. ಆದರೆ ಮುಂಬೈಗೆ ಹಿಂದಿರುಗಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದರು ಎಂದು ವಿಧಾನ ಪರಿಷತ್‌ನಲ್ಲಿ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ
ಶಿವಸೇನೆ (ಉದ್ಧವ್ ಬಣ) ನಾಯಕ ಅನಿಲ್ ಪರಬ್ ಕೂಡ ಇದೇ ರೀತಿಯ ಹಿಂಬಾಗಿಲಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಿಂಧೆ ಆರೋಪಿಸಿದ್ದಾರೆ. ಅನಿಲ್ ಪರಬ್, ನಿಮಗೆ ನೋಟಿಸ್ ಬಂದಾಗ ನೀವು (ಬಿಜೆಪಿ ನಾಯಕರನ್ನು ಭೇಟಿ ಮಾಡಲು) ಹೋಗಿದ್ದೀರಿ. ಪ್ರಕರಣದಿಂದ ಪಾರಾಗಲು ನೀವು ಕೇಳಿದ್ದೀರಿ. ನಿಮಗೆ ಪರಿಹಾರ ಸಿಕ್ಕ ನಂತರ, ನೀವು ಪಕ್ಷ ಬದಲಾಯಿಸಿದ್ದೀರಿ. ಇದು ನನಗೆ ಚೆನ್ನಾಗಿ ತಿಳಿದಿದೆ ಎಂದು ಡಿಸಿಎಂ ಕಾಲೆಳೆದಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ)ಯಿಂದ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಶಿಂಧೆ, ತಮ್ಮ ಬಣವು ಠಾಕ್ರೆಗಿಂತ ಭಿನ್ನವಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್
ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ನಾವು ಗೌಪ್ಯವಾಗಿ ಏನೂ ಮಾಡಲಿಲ್ಲ. ಬಿಲ್ಲು-ಬಾಣದ ಸಂಕೇತವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ಈ ನಿಲುವು ತೆಗೆದುಕೊಂಡೆವು. ನೀವು (ಠಾಕ್ರೆ) ಔರಂಗಜೇಬ್ ಅವರ ಸಿದ್ಧಾಂತವನ್ನು ಸ್ವೀಕರಿಸಿದಾಗ, ನಾವು ನಿಮ್ಮ ಬಂಡಿಯನ್ನು ಉರುಳಿಸಿದೆವು ಎಂದು ಶಿಂಧೆ ಸದನದಲ್ಲಿ ಹೇಳಿದ್ದಾರೆ.