ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

Public TV
3 Min Read
Devendra Fadnavis

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹಿಂಸಾಚಾರ (Nagpur violence) ಘಟನೆಯು ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರಿಂದು ವಿಧಾನಸಭೆಯಲ್ಲಿ ಮಾತನಾಡಿದ್ದು, ಈ ಹಿಂಸಾಚಾರವು ಆಕಸ್ಮಿಕವಾಗಿ ನಡೆದಿಲ್ಲ. ಇದು ಪೂರ್ವ ಯೋಜಿತ ದಾಳಿ ಎಂದು ಆರೋಪಿಸಿದ್ದಾರೆ.

Aurangzeb Tomb Row Nagpur Violence

ನಾಗ್ಪುರದ ಮಹಾಲ್ ಪ್ರದೇಶದಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದ ಸದಸ್ಯರು ಚತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ನಂತರ ಈ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಗ್ರಂಥ ಕುರಾನ್‌ ಅನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿಗಳು ಹರಡಿದ್ದವು. ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಘಟನೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕ ಆಸ್ತಿಗೆ ದಾಳಿ ನಡೆದಿದ್ದು, 33 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತಾ, ಈ ದಾಳಿಯು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶದಿಂದ ನಡೆದಿದೆ. ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದ್ದು, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಆರೋಪಿಗಳು ಯಾರೇ ಆಗಿರಲಿ, ಯಾವ ಧರ್ಮಕ್ಕೆ ಸೇರಿದವರಾಗಿರಲಿ, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅನುಮತಿ ಇಲ್ಲ. ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Aurangzeb Tomb Row| ಧರ್ಮಗ್ರಂಥ ಸುಟ್ಟ ವದಂತಿಯಿಂದ ನಾಗ್ಪುರದಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

ಈ ಘಟನೆಯ ಹಿನ್ನೆಲೆಯಲ್ಲಿ ನಾಗ್ಪುರ ಹಲವು ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊತ್ವಾಲಿ, ಗಣೇಶಪೇಠ, ತಹಸೀಲ್, ಲಕಡ್‌ಗಂಜ್, ಪಚಪಾವ್ಲಿ, ಶಾಂತಿನಗರ, ಸಕ್ಕರದಾರಾ, ನಂದನವನ್, ಇಮಾಮವಾಡಾ, ಯಶೋಧರನಗರ ಮತ್ತು ಕಪಿಲನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಅನ್ವಯಿಸುತ್ತದೆ. ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ಸಿಂಗಲ್ ಅವರು ಈ ಆದೇಶ ಹೊರಡಿಸಿದ್ದು, ಮುಂದಿನ ಸೂಚನೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಬಾಗ್ಚಿ ಅಧಿಕಾರ ಸ್ವೀಕಾರ – 2031ರಲ್ಲಿ ಸಿಜೆಐ ಅಗಲಿದ್ದಾರೆ ಬಾಗ್ಚಿ

ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡುವ ಖಾತೆಗಳ ಮೇಲೆಯೂ ನಿಗಾ ಇಡಲಾಗಿದೆ. ಮಹಾರಾಷ್ಟ್ರ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಪ್ಯಾರೆ ಖಾನ್ ಅವರು, ಈ ಹಿಂಸಾಚಾರದಲ್ಲಿ ಬಾಹ್ಯ ಜನರೇ ಭಾಗಿಯಾಗಿದ್ದಾರೆ. ನಾಗ್ಪುರದ ಸಾಮರಸ್ಯವನ್ನು ಭಂಗಗೊಳಿಸಲು ಇದೊಂದು ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರತಿಪಕ್ಷಗಳು ಈ ಘಟನೆಯನ್ನು ರಾಜ್ಯ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ ಎಂದು ಟೀಕಿಸಿವೆ. ಕಾಂಗ್ರೆಸ್ ನಾಯಕ ರೇಣುಕಾ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿಗಳು ತಮ್ಮ ರಾಜಧರ್ಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಂವಿಧಾನ ವಿರುದ್ಧವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟು, ಮತಬ್ಯಾಂಕ್‌ ಗಟ್ಟಿಮಾಡಿಕೊಳ್ತಿದೆ: ಬೊಮ್ಮಾಯಿ

ಇದೇ ವೇಳೆ, ಕೇಂದ್ರ ಸಚಿವ ಮತ್ತು ನಾಗ್ಪುರ ಸಂಸದ ನಿತಿನ್ ಗಡ್ಕರಿ ಅವರು ಶಾಂತಿ ಕಾಪಾಡುವಂತೆ ಮತ್ತು ವದಂತಿಗಳನ್ನು ನಂಬದಂತೆ ಜನರಿಗೆ ಮನವಿ ಮಾಡಿದ್ದಾರೆ.

Share This Article