ಮಂಗಳೂರು: ರಾಜ್ಯದ ಅತೀ ದೊಡ್ಡ ಡ್ರಗ್ಸ್ ಪ್ರಕರಣ ತನಿಖೆ ನಡೆಸುತ್ತಿರುವ ಮಂಗಳೂರು (Mangaluru) ಸಿಸಿಬಿ ಪೊಲೀಸರು, ರಾಜ್ಯಕ್ಕೆ ಸರಬರಾಜಾಗುತ್ತಿದ್ದ ಡ್ರಗ್ಸ್ ದೆಹಲಿಯಲ್ಲಿ (Delhi) ತಯಾರಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.
ಡ್ರಗ್ಸ್ ಸಾಗಿಸುತ್ತಿದ್ದ ದಕ್ಷಿಣ ಆಫ್ರಿಕಾದ ಬಾಂಬ ಫಾಂಟಾ ಹಾಗೂ ಅಜಿಗೈಲ್ ಅಡೊನಿಸ್ ಎಂಬ ಮಹಿಳೆಯರನ್ನು ಬಂಧಿಸಲಾಗಿತ್ತು. ಈ ಇಬ್ಬರನ್ನು 7 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಮಂಗಳೂರು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ದೆಹಲಿಯ ಕೈಗಾರಿಕಾ ಪ್ರದೇಶದಲ್ಲೇ ಡ್ರಗ್ಸ್ ತಯಾರಾಗುತ್ತಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಫಾರ್ಮಾ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಸುವ ಬಗ್ಗೆ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ, ದೆಹಲಿಯಲ್ಲಿ ಮಂಗಳೂರು ಪೊಲೀಸರ ತಂಡ ತನಿಖೆ ಆರಂಭಿಸಿದೆ.
ಮಂಗಳೂರು ಪೊಲೀಸರು ಬಯಲಿಗೆಳೆದಿರುವ ಡ್ರಗ್ಸ್ ಜಾಲದ ಬಗ್ಗೆ ಕೇಂದ್ರ ಅಪರಾಧ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕಲಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, 37.5 ಕೆಜಿ ತೂಕದ ಎಂಡಿಎಂಎನ್ನು ವಶಪಡಿಸಿಕೊಂಡಿದ್ದರು. ಲಾಸ್ಟ್ ಕಸ್ಟಮರ್ ರೇಟ್ ಪ್ರಕಾರ, ಈ ಡ್ರಗ್ಸ್‌ನ ಬೆಲೆ 74 ಕೋಟಿ ರೂ. ಆಗಿದೆ.