ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್ (George Soros) ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್ (Open Society Foundation) ಫಲಾನುಭವಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದು ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಸಿದೆ.
ಒಟ್ಟು ಮೂರು ಕಂಪನಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಪರಿಶೀಲನೆ ನಡೆಸುತ್ತಿದೆ.
ಭಾರತದಲ್ಲಿ ಓಎಸ್‌ಎಫ್ 1999 ರಿಂದ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಓಎಸ್‌ಎಫ್ ವಿದ್ಯಾರ್ಥಿವೇತನಗಳನ್ನು ನೀಡುತ್ತಿತ್ತು. ನಂತರ ಅನುದಾನ ನೀಡಿಕೆ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.
ಓಪನ್ ಸೊಸೈಟಿ ಫೌಂಡೇಶನ್ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಹಾಗೂ ಸ್ವತಂತ್ರ ಮಾಧ್ಯಮಗಳನ್ನು ಮುನ್ನಡೆಸುವ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಭಾರತದಲ್ಲಿ 4,06,000 ಡಾಲರ್ ಖರ್ಚು ಮಾಡಿದೆ ಎಂದು ಓಎಸ್‌ಎಫ್ ಹೇಳಿತ್ತು. ಇದನ್ನೂ ಓದಿ: ಭೂಮಿಗೆ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್ – ಎಲ್ಲಿ ಇಳಿಯುತ್ತಾರೆ? ಇಳಿಯುವ ಪ್ರಕ್ರಿಯೆ ಹೇಗೆ? ಇಳಿದ ನಂತರ ಮುಂದೇನು?
ಈ ಹಿಂದೆ ಅದಾನಿ ಕಂಪನಿ ಮತ್ತು ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರ್ ಬುಚ್ ವಿರುದ್ಧ ಹಿಂಡೆನ್‌ಬರ್ಗ್ ವರದಿ ಪ್ರಕಟಿಸಿದಾಗ ಬಿಜೆಪಿ ಜಾರ್ಜ್ ಸೊರೊಸ್ ಹೆಸರನ್ನು ಎಳೆದು ತಂದಿತ್ತು. ಹಿಂಡನ್ ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರ ಜಾರ್ಜ್ ಸೊರೊಸ್. ಈ ವ್ಯಕ್ತಿ ಹಲವು ದೇಶಗಳ ಆರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಭಾರತದ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಸಂಚು ಎಂದು ಆರೋಪಿಸಿತ್ತು.
ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ. ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದ್ದರು.