ಕೇಪ್ ಕೆನವೆರಲ್: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS)ಸಿಲುಕಿದ್ದ ಭಾರತ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ (Sunita Williams) ಮತ್ತು ನಾಸಾದ (NASA) ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಭೂಮಿ ಪ್ರವೇಶಕ್ಕೆ ಕೌಂಟ್‌ಡೌನ್ ಆರಂಭವಾಗಿದೆ.
ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತರಲಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನೌಕೆ ನಿರ್ಗಮಿಸಿದೆ. ಎಲ್ಲವೂ ನಿಗದಿಯಂತೆ ನಡೆದರೆ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಭೂಮಿಗೆ ತಲುಪಲಿದ್ದಾರೆ.
ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ (Crew Dragon Capsule) ಹೊತ್ತುಕೊಂಡು ಫಾಲ್ಕನ್-9 ರಾಕೆಟ್ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್ ತಲುಪಿತ್ತು.
They’re on their way! #Crew9 undocked from the @Space_Station at 1:05am ET (0505 UTC). Reentry and splashdown coverage begins on X, YouTube, and NASA+ at 4:45pm ET (2145 UTC) this evening. pic.twitter.com/W3jcoEdjDG
— NASA (@NASA) March 18, 2025
ಎಲ್ಲಿ ಇಳಿಯಲಿದ್ದಾರೆ?
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಸಮುದ್ರದ ಮೇಲೆ ಇಳಿಯಲಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್ ನಿಧಾನವಾಗಿ ಲ್ಯಾಂಡ್ ಆಗುತ್ತದೆ. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತದೆ. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್ ವೇಗವನ್ನು ತಗ್ಗಿಸುತ್ತವೆ. ವೇಗ ತಗ್ಗಿದಂತೆ ಕ್ಯಾಪ್ಸೂಲ್ ನಿಧನವಾಗಿ ಸಮುದ್ರದಲ್ಲಿ ಲ್ಯಾಂಡ್ ಆಗಿ ತೇಲುತ್ತಿರುತ್ತದೆ.
ಲ್ಯಾಂಡ್ ಆದ ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿ ಕ್ಯಾಪ್ಸೂಲ್ ಬಳಿ ಬರುತ್ತಾರೆ. ಈ ಕ್ಯಾಪ್ಸೂಲ್ ಅನ್ನು ರೋಪ್ ಬಳಸಿ ದಡದ ಹತ್ತಿರ ತರುತ್ತಾರೆ. ನಂತರ ಕ್ರೇನ್ ಬಳಸಿ ಕ್ಯಾಪ್ಸೂಲ್ ಅನ್ನು ದೊಡ್ಡ ಬೋಟ್ ಒಳಗಡೆ ಇಡಲಾಗುತ್ತದೆ. ಬೋಟ್ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲನ್ನು ತೆರೆಯಲಾಗುತ್ತದೆ. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್ ಚೇರ್‌ನಲ್ಲಿ ಕುಳ್ಳಿರಿಸುತ್ತಾರೆ.
#Crew9 will soon be headed back to Earth—but in their time on the @Space_Station, they’ve helped with @ISS_Research studies to design better reactors, build wooden satellites, and prepare for missions to the Moon and Mars: https://t.co/CKZmVKRe94 pic.twitter.com/YMwdbi2zp1
— NASA (@NASA) March 17, 2025
ಮುಂದೇನು?
ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
ಒಂಬತ್ತು ತಿಂಗಳುಗಳ ಕಾಲ ಶೂನ್ಯ ಗುರುತ್ವಾಕರ್ಷಣೆಯಲ್ಲಿ ವಾಸಿಸುವುದರಿಂದ ಅವರ ಕಾಲುಗಳಲ್ಲಿ ಸ್ನಾಯು ಕ್ಷೀಣತೆ ಉಂಟಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣೆಯಲ್ಲಿ ನಡೆಯಲು ಕಷ್ಟವಾಗುತ್ತದೆ. ಪೂರ್ಣ ಶಕ್ತಿಯನ್ನು ಮರಳಿ ಪಡೆಯಲು ವಾರಗಳು ಅಥವಾ ತಿಂಗಳು ಬೇಕಾಗುತ್ತದೆ.
9 ತಿಂಗಳು ತಡವಾಗಿದ್ದು ಯಾಕೆ?
2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈ ಮುಂಚೆ 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಮಾರ್ಚ್‌ಗೆ ಮುಂದೂಡಿಕೆ ಆಗಿತ್ತು.
ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.