ಬಳ್ಳಾರಿ: ವಿಜಯನಗರದ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿಯಲ್ಲಿ ಮೈ ಜುಮ್ಮೆನಿಸುವ ವಿಶಿಷ್ಟ ಆಚರಣೆ ಮೂಲಕ ಜಾತ್ರೆಯೊಂದು ನಡೆಯುತ್ತದೆ. ಈ ಜಾತ್ರೆಯಲ್ಲಿ ಬರಿಗೈಯಲ್ಲಿ ಬೆಂಕಿ ಕೆಂಡ ತೂರಿ ಭಕ್ತಿಯನ್ನು ಮೆರೆಯುತ್ತಾರೆ.
ಈಗಿನ ಕಾಲದಲ್ಲಿ ಬೆಂಕಿ ಕಂಡರೆ ಸಾಕು ಭಯ ಬೀಳುತ್ತೇವೆ. ಹೀಗಿರುವಾಗ ವಿಜಯನಗರದ ಹೊಸಹಟ್ಟಿಯಲ್ಲಿ ಬೇಡ ಬುಡಕಟ್ಟಿನ ಜನರು ವಿಶಿಷ್ಟ ಆಚರಣೆಯ ಮೂಲಕ ಬೊಗ್ಗಲು ಓಬಳೇಶ್ವರ ಸ್ವಾಮಿ ಗುಗ್ಗರಿ ಹಬ್ಬದಲ್ಲಿ ಬರಿಗೈಯಲ್ಲಿ ಕೆಂಡ ತೂರುತ್ತಾರೆ.ಇದನ್ನೂ ಓದಿ: ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು
ಸಾಮಾನ್ಯವಾಗಿ ಜಾತ್ರೆಗಳಲ್ಲಿ ಕೆಂಡ ಹಾಯುವುದು, ಕೆಂಡ ಹಿಡಿದು ಓಡುವುದನ್ನು ನೋಡಿದ್ದೇವೆ, ಆದರೆ ಈ ಹಟ್ಟಿಯಲ್ಲಿ ಕೆಂಡ ತೂರುವ ಪದ್ಧತಿ ಇದೆ. ಬೆಂಕಿ ಕೆಂಡ ಮೈ ಮೇಲೆ ಬಿದ್ದರೂ ಯಾರಿಗೂ ಏನೂ ಆಗುವುದಿಲ್ಲ. ಬರಿಗೈಯಲ್ಲಿ ಕೆಂಡ ತೂರುವಂತಹ ಬೇಡ ಬುಡಕಟ್ಟಿನ ಆಚರಣೆಯು ನೆರೆದಿದ್ದ ಭಕ್ತರ ಮೈ ರೋಮಾಂಚನಗೊಳಿಸುತ್ತದೆ.
ಆರಂಭದಲ್ಲಿ ಗಂಗೆ ಪೂಜೆಯೊಂದಿಗೆ ಉರುಮೆ, ಹಲಗೆ ವಾದನಕ್ಕೆ ಜನ ಹೆಜ್ಜೆ ಹಾಕುತ್ತಾರೆ. ಆ ಬಳಿಕ ದೇವಸ್ಥಾನದ ಬಳಿ ಬಂದು ಬರಿಮೈಯಲ್ಲಿರುವ, ವ್ರತನಿರತ 30ಕ್ಕೂ ಹೆಚ್ಚು ಜನರ ಗುಂಪು ಕೆಂಡ ತೂರುತ್ತಾರೆ. 4-5 ಗಾಡಿಯಷ್ಟು ಕಟ್ಟಿಗೆ ಸುಟ್ಟ ರಾಶಿಯಾಗಿದ್ದ ಕೆಂಡವನ್ನು ಬರಿ ಕೈಯಲ್ಲೇ ಆಕಾಶಕ್ಕೆ ತೂರುತ್ತಾರೆ. ಈ ವೇಳೆ ನೆರೆದವರ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸಂಭ್ರಮ ಮುಗಿಲು ಮುಟ್ಟಿತ್ತು. ವಿಶಿಷ್ಟ ಆಚರಣೆ ಹಿನ್ನೆಲೆ ಇಡೀ ಗ್ರಾಮವೇ ಕತ್ತಲಮಯವಾಗಿದ್ದರಿಂದ ಕೆಂಡದ ಮಳೆ ಸುರಿದಂತೆ ಭಾಸವಾಗುತ್ತದೆ.
ಆಕಾಶದತ್ತ ತೂರಿದ ಕೆಂಡವು ಸುತ್ತಲೂ ನೆರೆದವರ ಮೈಮೇಲೆ ಬಿದ್ದರೂ ಸುಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಹೊಸಹಟ್ಟಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಬೆಂಕಿ ತೂರುವ ಈ ಆಚರಣೆ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿದ್ದರು.ಇದನ್ನೂ ಓದಿ: ಯೂತ್ ಕಾಂಗ್ರೆಸ್ ಅಧ್ಯಕ್ಷನ ಗೂಂಡಾಗಿರಿ – ಮಧ್ಯರಾತ್ರಿ ಎಣ್ಣೆ ಕೊಡ್ಲಿಲ್ಲ ಎಂದು ಬೆಳಗ್ಗೆ ಬಾರ್‌ಗೆ ನುಗ್ಗಿ ಹಲ್ಲೆ