ಪ್ರತಿದಿನ ಕೊಟ್ಟ ಕೊಟ್ಟನೆ ಕುಟುಕುವ ಕಂಪ್ಯೂಟರಿನ ಕೀಲಿಮಣೆಯ ಸದ್ದೇ ಕಿವಿಗೆ ರಾಚುತ್ತಿದ್ದ ಹೊತ್ತಿನಲ್ಲಿ ಅದೇಕೋ ಅವಳಾಡಿದ ಮಾತುಗಳು ನೆನಾಪಯ್ತು. ಹೌದು.. ಕಾಲೇಜಿನಲ್ಲಿದ್ದಾಗ ನಾವಿಬ್ಬರು ಅದೆಷ್ಟು ಬಾರಿ ಜಗಳ ಮಾಡಿದ್ವಿ.. ಲೆಕ್ಕಕ್ಕೆ ಸಿಗಲ್ಲ. ಅಕ್ಕಪಕ್ಕದ ಬೆಂಚಿನಲ್ಲಿ ಕೂತರೂ ನನ್ನ ಮುಖ ಅವಳು.. ಅವಳ ಮುಖ ನಾನು ನೋಡದಷ್ಟೂ ಮುನಿಸು.. ಕೆಲವೊಮ್ಮೆ ಅವಳು ʻಲೋ ಮೋಹನ, ನಿನ್ನ ಹೆಸ್ರಲ್ಲಿರುವ ಮೋಹ ಮುಖದಲ್ಲಿಲ್ಲ, ಪ್ರೀತಿಯಲ್ಲಿಲ್ವೇ ಇಲ್ಲ ಅಂದುಬಿಡ್ತಿದ್ಲು.. ಆದ್ರೆ ಆ ಜಗಳದಿಂದ ನಮ್ಮಿಬ್ಬರ ಮಧ್ಯೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗ್ತಿರ್ಲಿಲ್ಲ….
ನಾನ್ಯಾಕೆ ಈತರ ಮಾಡ್ತಿದ್ದೇನೆ ಗೊತ್ತಿಲ್ಲ. ಮೋಸ್ಟ್ ಲೀ ಅದು ನನ್ನ ಹುಟ್ಟು ಸ್ವಭಾವ ಇರಬಹುದು. ಕೆಲವೊಮ್ಮೆ ಅವಳ ಮುದ್ದು ಮುಖ ನೋಡಲೇಂದೆ ಕೊಂಕು ಬಿಂಕದ ಮಾತನಾಡಿ ಕೋಪ ತರಿಸಿದ್ದೂ ಉಂಟು… ಯಾಕಂದ್ರೆ 5 ನಿಮಿಷ ಅವಳಿಗೆ ಕೋಪ ಬಂದ್ರೆ ಒಂದು ಗಂಟೆ ಪೆದ್ದು ಮನಸ್ಸಿನ ಹುಡುಗಿ ಮುದ್ದು ಮಾತಿಗೆ ಮರುಳಾಗುತ್ತಿದ್ದಳು. ಕಾಲೇಜು ದಿನಗಳ ಕೊನೆ ಕೊನೆಯಲ್ಲಂತೂ ಹುಚ್ಚಿಯಂತೆ ಪ್ರೀತಿಸತೊಡಗಿದ್ಲು.. ಮೊಬೈಲುಗಳ ಹಾವಳಿಯಿಲ್ಲದ ಆ ಕಾಲದಲ್ಲೂ ಮನೆಯಲ್ಲಿ ಖರ್ಚಿಗೆ ಕೊಡ್ತಿದ್ದ 3 ರೂಪಾಯಿಯಲ್ಲೇ 1 ರೂಪಾಯಿ ನನಗಾಗಿ ಮೀಸಲಿಟ್ಟು ಕಾಯಿನ್ ಬಾಕ್ಸ್‌ನಲ್ಲಿ ಮಾತನಾಡ್ತಿದ್ಲು.. 60 ಸೆಕೆಂಡುಗಳಲ್ಲೇ ವಾರದ ಸಮಾಚಾರ ಮುಗಿಸುತ್ತಿದ್ದೆವು.
ಒಂದೊಮ್ಮೆ ನಾನು ಅವಳನ್ನು ಕೇಳಿದೆ.. ನೀನೇಕೆ ನನ್ನನ್ನ ಹುಚ್ಚಿಯಂತೆ ಪ್ರೀತಿಸ್ತಿಯ? ನಾವಿಬ್ಬರೂ ಮದ್ವೆಯಾದ್ರೆ ಇಷ್ಟೇ ಸಂತೋಷವಾಗಿರ್ತೀವಾ? ಅಂತ ಪ್ರಶ್ನೆಗಳ ಮಳೆ ಸುರಿಸಿಬಿಟ್ಟೆ. ಹುಡುಗನಾಗಿ ನಾನೇ ಇಷ್ಟು ಮಾತನಾಡಿದ್ಮೇಲೆ ಅವಳು ಸುಮ್ಮನಿರ್ತಾಳೆಯೇ? ಮೊದಲೇ ಹೆಣ್ಣು ಬಾಯಿ.. ಆ ರಸ್ತೆ ಬದಿಯ ಪಾನಿಪೂರಿ ತಿನ್ನುತ್ತಲೇ ಒಂದು ಉಪನ್ಯಾಸ ಕೊಟ್ಳು… ಅದನ್ನಿಲ್ಲಿ ಹಂಚಿಕೊಳ್ತಿದ್ದೇನೆ.
ಸಂತೋಷ… ಜಗತ್ತಿನಲ್ಲಿ ಎಲ್ಲರೂ ಬಯಸುವ ಒಂದು ಅದ್ಭುತ. ಸಂತೋಷವನ್ನ ಬೇಡ ಎಂದು ದೂರ ತಳ್ಳುವವರಿಲ್ಲ. ಇದು ನಮ್ಮೆಲ್ಲರ ಬದುಕಿನ ಪ್ರೇರಕ ಶಕ್ತಿ. ಬದುಕಿನಲ್ಲಿ ನಾವು ಎಲ್ಲರೊಂದಿಗೂ ಉಚಿತವಾಗಿ ಹಂಚಲು ಸಾಧ್ಯವಾಗುವುದು ಸಂತೋಷವನ್ನ ಮಾತ್ರ. ಮನುಷ್ಯನ ಬದುಕು ನೂರಾರು ಭಾವನೆಗಳ ಸಮ್ಮಿಲನ. ಆದರೆ, ಈ ಎಲ್ಲಾ ಭಾವನೆಗಳನ್ನೂ ಮೀರಿದ್ದು ಸಂತೋಷ. ಇದು ಬದುಕಿನ ಭರವಸೆಯೂ ಹೌದು. ಆಯುಷ್ಯವನ್ನು ಹೆಚ್ಚಿಸುವ ಮಾಂತ್ರಿಕ ಶಕ್ತಿಯೂ ಹೌದು. ಸಂತೋಷದಿಂದ ಇರುವುದು ಒಂದು ಕಲೆ, ಸದಾ ಸಂತೋಷದಿಂದ ಇರಲು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರು ಅದೆಷ್ಟೋ ನೋವಿದ್ದರೂ ಸಂತೋಷದಿಂದಲೇ ಬದುಕುತ್ತಿರುತ್ತಾರೆ ಅಂತರ ಮಾರುದ್ದ ಹೇಳುತ್ತಲೇ ಇದ್ದಳು.. ಅಷ್ಟಕ್ಕೆ ಬಿಟ್ಟು ಸುಮ್ಮನಾಗಬೇಕಲ್ವೇ? ಆದ್ರೆ ಅವಳ ಮಾತು ನಿಲಲ್ಲಿಲ್ಲ…
ಮಾರ್ಚ್ 20ರಂದು ಸಂತೋಷದ ದಿನ:
ನಮ್ಮ ಜೀವನದಲ್ಲಿ ಸಂತೋಷದ ಅಸ್ತಿತ್ವದ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಪ್ರತಿವರ್ಷ ಮಾರ್ಚ್ 20ರಂದು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. 2012ರ ಜುಲೈ 12 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 20 ಅನ್ನು ಅಂತಾರಾಷ್ಟ್ರೀಯ ಸಂತೋಷದ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ಈ ದಿನದಂದು ವಿಶ್ವ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಇದು ಸಂತೋಷದ ಅಸ್ಮಿತೆಯನ್ನು ಸಂಭ್ರಮಿಸುವ ದಿನ. ಸಂತೋಷ ಎಂಬುದು ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಂತೋಷವು ಮಾನವನ ಮೂಲಭೂತ ಗುರಿಯಾಗಿದೆ. ಸಂತೋಷವು ಆರೋಗ್ಯ, ಆಯುಷ್ಯ ವೃದ್ಧಿಸುವ ಶಕ್ತಿಯನ್ನೂ ಹೊಂದಿದೆ. ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಸಂತೋಷದ ಗುರಿಯನ್ನು ಗುರುತಿಸಿ ಈ ದಿನದ ಆಚರಣೆಗೆ ಕರೆ ನೀಡಿದೆ. ಇದು ಜಗತ್ತಿಗೆ ಸಂತೋಷವನ್ನು ಹರಡುವ ದಿನವಾಗಿದೆ. ಸದಾ ನಗುತ್ತಾ, ನಗಿಸುತ್ತಾ ಸದಾ ಖುಷಿಯಿಂದ ಇರೋಣ, ಎಲ್ಲರಿಗೂ ಖುಷಿ ಹಂಚುತ್ತಾ ಬದುಕನ್ನು ಸಂಭ್ರಮದಿಂದ ಕಳೆಯೋಣ. ಸಂತೋಷದಿಂದಲೇ ಬದುಕನ್ನು ಅಂತ್ಯಗೊಳಿಸೋಣ, ದ್ವೇಷಕ್ಕೆ ಬಾ ಹೇಳಿ ಖುಷಿಯನ್ನು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸೋಣ ಅಂದುಬಿಟ್ಟಳು. ಎಲ್ಲರ ಪ್ರೀತಿಗೂ ವಿಲನ್ ಒಬ್ಬ ಇರ್ಲೇಬೇಕಲ್ಲವೇ? ಹಾಗೆಯೇ ನನ್ನ ಪ್ರೀತಿಯಲ್ಲಿ ಆಕೆಯ ಅಪ್ಪ-ಅಮ್ಮನೇ ವಿಲನ್ ಆಗಿಬಿಟ್ಟರು. ಮೊದಲ ವರ್ಷದ ಪಿಯುಸಿ ಮುಗಿದು ಬೇಸಿಗೆ ರಜೆ ಬಂದಿದ್ದೇ ತಡ. ಮರು ವರ್ಷಕ್ಕೆ ಆಕೆಯನ್ನ ಬೇರೆ ಕಾಲೇಜಿಗೆ ಸೇರಿಸಿಬಿಟ್ರು.
ವರುಷಗಳೇ ಕಳೆದವು…ಆದರೆ ನನ್ನ ಹೃದಯದಿಂದ ಅವಳ ನೆನಪು ಕಿತ್ತಾಕಲಾಗಲಿಲ್ಲ… ಅದೆಷ್ಟೋ ವರ್ಷಗಳು ಕಳೆದ ಬಳಿಕ ಮತ್ತೆ ಅಚಾನಕ್ಕಾಗಿ ಸಿಕ್ಕಳು. ಹೇಗೋ ಫೋನ್‌ನಂಬರ್ ಸಹ ಇಸ್ಕೊಂಡೇ ಈಗಲೂ ಅವಳೊಂದಿಗೆ ಸಂಪರ್ಕದಲ್ಲಿದ್ದೇನೆ…. ವರ್ಷಗಳೇ ಕಳೆದರೂ ಆ ಒಂದು ಮಾತಿಗಾಗಿ ಕಾಯ್ತಿದ್ದೀನಿ… ಏಕೆಂದರೆ ಅವಳು ನನ್ನನ್ನು ಅರ್ಥ ಮಾಡಿಕೊಂಡಷ್ಟು ಮತ್ತಾರೂ ಮಾಡಿಕೊಂಡಿಲ್ಲ… ಅವಳು ಸಿಕ್ಕರೇ ಪ್ರತಿ ದಿನವೂ ಅಂತೋಷದ ದಿನವೇ… ಇಂತಿ ನಿನ್ನವ
ಮೋಹನ ಬನ್ನಿಕುಪ್ಪೆ