ಕನ್ನಡ ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ನೋಟಿಫಿಕೇಶನ್‌ನಲ್ಲಿ ಅಕ್ಷರದೋಷ ಸರಿಪಡಿಸ್ತೇವೆ ಎಂದ BMRCL

Public TV
2 Min Read
BMRCL namma Metro

ಬೆಂಗಳೂರು: ಇನ್ನೊಮ್ಮೆ ಬಿಎಂಆರ್‌ಸಿಎಲ್ ಹುದ್ದೆಯ ನೋಟಿಫಿಕೇಶನ್ ನೋಡಿ, ಏನಾದರೂ ಅಕ್ಷರದೋಷ ಇದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (BMRCL) ಎಂಡಿ ಮಹೇಶ್ವರ್ ರಾವ್ ಹೇಳಿದ್ದಾರೆ.

ಬಿಎಂಆರ್‌ಸಿಎಲ್ ಹುದ್ದೆಗೆ ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಂತೆ ಮಾಡಿರುವ ನಿಯಮದ ಕುರಿತು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾವು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ನಮ್ಮ ಜನ ಕೂಡ ತರಬೇತಿ ಪಡೆದು ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ 10 ವರ್ಷದಿಂದ ಕೆಲಸ ಮಾಡುತ್ತಿದೆ. ಆಪರೇಷನ್‌ನಲ್ಲಿ ಕನ್ನಡಿಗರಿಗೆ ತಿಳುವಳಿಕೆಯ ಕೆಲಸದ ಬಗ್ಗೆ ಇದ್ದರೆ ತೆಗೆದುಕೊಳ್ಳೋಣ. ಇದು ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನ ಕರೆದಿರುವುದು. ಇನ್ನೊಮ್ಮೆ ನೋಟಿಫಿಕೇಷನ್ ನೋಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಈರಣ್ಣ ಕಡಾಡಿ

ಬಿಎಂಆರ್‌ಸಿಎಲ್‌ನ ಕನ್ನಡ ನೀತಿಯ ವಿರುದ್ಧ ಸಿಡಿದ ಕನ್ನಡ ಪರ ಹೋರಾಟಗಾರರು ಇಂದು ಬಿಎಂಆರ್‌ಸಿಎಲ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದರು. ಈಗಾಗಲೇ ನಮ್ಮ ಮೆಟ್ರೋ 50 ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆದರೆ ಈ ಹುದ್ದೆಗೆ ಕರ್ನಾಟಕದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕದಂತೆ ನಿಯಮ ಮಾಡಲಾಗಿದೆ. ಇದಕ್ಕೆ ಕರ್ನಾಟಕದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ನೇಮಕಾತಿ ಪ್ರಕ್ರಿಯೆ ವಾಪಸ್ಸು ಪಡೆಯುವಂತೆ ಆಗ್ರಹಿಸಿದರು. ಇದನ್ನೂ ಓದಿ: ಸೂಲಿಬೆಲೆ ವಿರುದ್ಧ ಉಳ್ಳಾಲದಲ್ಲಿ ಎಫ್‌ಐಆರ್‌ ದಾಖಲು

ಬಿಎಂಆರ್‌ಸಿಎಲ್ ಅಧಿಕಾರಿಗಳು ಅರ್ಜಿಯಲ್ಲಿ ಕೇಳಿರುವ ಮಾನದಂಡಗಳನ್ನು ಗಮನಿಸಿದರೆ, ನೇಮಕಾತಿಯಲ್ಲಿ ಕೇವಲ ಚೆನ್ನೈ ಮತ್ತು ಹೈದರಾಬಾದ್ ಮೆಟ್ರೋದಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿಯರನ್ನು ನಮ್ಮ ಮೆಟ್ರೋಗೆ ಕರೆದುಕೊಂಡು ಬರಲು ಪ್ಲಾನ್ ಮಾಡಿದ್ದಾರೆ. ಮೂರು ವರ್ಷ ಟ್ರೈನ್‌ ಓಡಿಸಿರುವ ಅನುಭವವನ್ನು ಬಿಎಂಆರ್‌ಸಿಎಲ್ ಕೇಳಿದೆ. ಕರ್ನಾಟಕ ಅಭ್ಯರ್ಥಿಗಳು ಯಾರು ಅರ್ಜಿ ಸಲ್ಲಿಸದಂತೆ ಮೆಟ್ರೋ ಅಧಿಕಾರಿಗಳು ನಿಯಮ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕದ್ದ ಖದೀಮರು – ಕಳ್ಳರ ಕರಾಮತ್ತಿನ ವಿಡಿಯೋ ಸೆರೆ

ಬಿಎಂಆರ್‌ಸಿಎಲ್ ಕಚೇರಿ ಮುಂದೆ ಕನ್ನಡ ಹೋರಾಟಗಾರರು ಧಿಕ್ಕಾರ ಕೂಗಿದರು. ಈ ವೇಳೆ ಪ್ರತಿಭಟನಾಕಾರರು ಕಚೇರಿಯ ಒಳ ನುಗ್ಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಲೊಕೋ ಪೈಲಟ್ ಹುದ್ದೆಗಳಿಗೆ ಕರ್ನಾಟಕದ ಯುವಕ, ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಇದು ಶಾಂತಿಯುತ ಹೋರಾಟ. ಕನ್ನಡಿಗರಿಗೆ ಅವಕಾಶ ನೀಡದಿದ್ದರೆ ಎಲ್ಲಾ ಮೆಟ್ರೋಗಳಿಗೆ ನುಗ್ಗುತ್ತೇವೆ ಎಂದು ಎಚ್ಚರಿಸಿ ಬಿಎಂಆರ್‌ಸಿಎಲ್ ಎಂಡಿಗೆ ಮನವಿ ಪತ್ರ ನೀಡಿದರು.

Share This Article