ರಷ್ಯಾ-ಉಕ್ರೇನ್, ಹಮಾಸ್-ಇಸ್ರೇಲ್ ಮಧ್ಯೆ ಕದನ ವಿರಾಮದ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹೌತಿ ಉಗ್ರರ ಕಿರಿಕ್ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಈ ಉಗ್ರರು ಈಗ ಮತ್ತೆ ನಾವು ವಾಣಿಜ್ಯ ಹಡುಗುಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ (USA) ಈಗ ಹೌತಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್ (Air Strike) ಮಾಡಿದೆ. ಹೀಗಾಗಿ ಇಲ್ಲಿ ಹೌತಿ ಉಗ್ರರು ಯಾರು? ಕೆಂಪು ಸಮುದ್ರ ಮಾರ್ಗ ಯಾಕೆ ಫೇಮಸ್? ಹೌತಿ ಉಗ್ರರು ದಾಳಿ ಮಾಡಿದರೆ ಭಾರತ (India) ಮತ್ತು ವಿಶ್ವದ ಮೇಲೆ ಆಗುವ ಪರಿಣಾಮ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಹೌತಿ ಉಗ್ರರು ಯಾರು?
1990ರಲ್ಲಿ ಯೆಮೆನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ.
ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.
ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
ಯುರೋಪ್ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ (Red Sea) ಆಗಮಿಸಿ ಯೆಮನ್ ಬಳಿ ಬಾಬ್ ಎಲ್ ಮಂಡೇಬ್ ಚೋಕ್ ಪಾಯಿಂಟ್ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.
ಹೌತಿ ಉಗ್ರರು ದಾಳಿ ನಡೆಸುತ್ತಿರುವುದು ಯಾಕೆ?
ಮೊದಲೇ ಹೇಳಿದಂತೆ ಹೌತಿ ಬಂಡುಕೋರರಿಗೆ ಮೊದಲಿನಿಂದಲೂ ಇಸ್ರೇಲ್ ವಿರೋಧಿ. ಅಷ್ಟೇ ಅಲ್ಲದೇ ಹಮಾಸ್ ಉಗ್ರರ ಜೊತೆ ಉತ್ತಮ ಸಂಬಂಧವನ್ನು ಹೌತಿ ಇಟ್ಟುಕೊಂಡಿದೆ. ಯಾವಾಗ ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮಾಡಿತೋ ಅದಕ್ಕೆ ಪ್ರತಿಯಾಗಿ ಹೌತಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿತು.
ಇಸ್ರೇಲ್ ನಡೆಸಿದ ದಾಳಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಬೆಂಬಲ ನೀಡಿದ್ದವು. ಇಸ್ರೇಲ್‌ಗೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕ ಮತ್ತು ಯುರೋಪ್ ಕಾರ್ಗೋ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ದಾಳಿ ನಡೆಸಿದರೆ ಇಸ್ರೇಲ್ ಮೇಲೆ ಈ ದೇಶಗಳು ಒತ್ತಡ ಹಾಕಿ ಯುದ್ಧ ನಿಲ್ಲಸಬಹುದು ಎಂಬ ಲೆಕ್ಕಾಚಾರ ಹೌತಿ ಉಗ್ರರದ್ದು.
ಅಮೆರಿಕದ ಬಾಂಬ್ ದಾಳಿಗೆ ಹೌತಿ ಉಗ್ರರ ನೆಲೆ ಉಡೀಸ್
ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್ https://t.co/PKwHnJ1Jpa…
#DonaldTrump #Yemen #HouthiRebels #AirStrike #USA pic.twitter.com/duRmxGyqUU
— PublicTV (@publictvnews) March 16, 2025
ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್ ದಾಳಿ ನಡೆಸಿದೆ.
ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್ ಮಾಡಿದೆ.
ವಿಶ್ವಕ್ಕೆ ಸಮಸ್ಯೆ ಯಾಕೆ?
ಯೆಮೆನ್ ಪಶ್ಚಿಮ ಭಾಗವನ್ನು ಹೌತಿ ಉಗ್ರರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಭಾಗವನ್ನು ವಶಪಡಿಸಿಕೊಂಡಿದ್ದರೂ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಈಗ ಕಿರಿಕ್ ಮಾಡುತ್ತಿರುವುದು ಬಾಬ್ ಎಲ್ ಮಂಡೇಬ್ ಎಂಬ ಚೋಕ್ ಪಾಯಿಂಟ್‌ನಲ್ಲಿ. ಈ ಚೋಕ್ ಪಾಯಿಂಟ್ 50 ಕಿ.ಮೀ ಉದ್ದ ಇದ್ದರೆ 26 ಕಿ.ಮೀ ಅಗಲ ಹೊಂದಿದೆ. ಈ ಚೋಕ್‌ಪಾಯಿಂಟ್ ಬ್ಲಾಕ್ ಮಾಡಿ ಕಿರಿಕ್ ಮಾಡುವುದು ಹೌತಿ ಉಗ್ರರ ಉದ್ದೇಶ.
ಈ ಸಮುದ್ರ ಮಾರ್ಗ ಎಷ್ಟು ಮುಖ್ಯ ಅಂದರೆ ವಿಶ್ವದ ಕಂಟೈನರ್ ಟ್ರಾಫಿಕ್ ಪೈಕಿ ಶೇ.30 ರಷ್ಟು ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಶೇ.7 ರಿಂದ ಶೇ.10 ರಷ್ಟು ಕಚ್ಚಾ ತೈಲ ಹಡಗುಗಳು ಈ ರೂಟ್‌ನಲ್ಲಿ ಸಾಗುತ್ತದೆ. ಕೆಂಪು ಸಮುದ್ರದ ಮೂಲಕ ವರ್ಷಕ್ಕೆ 1 ಟ್ರಿಲಿಯನ್ ಡಾಲರ್ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್ ಮೇಲೆ ಹೌತಿ ಉಗ್ರರಿಂದ ಡ್ರೋನ್ ದಾಳಿ
ಹಿಂದೆ ಸೂಯೆಜ್ ಕಾಲುವೆಯಲ್ಲಿ ಕಂಟೈನರ್ ಹಡಗು ಅರ್ಧಕ್ಕೆ ನಿಂತಿತ್ತು. 6 ದಿನ ಕಾಲುವೆಯಲ್ಲೇ ನಿಂತ ಕಾರಣ ವಿಶ್ವಕ್ಕೆ ಅಂದಾಜು 54 ಶತಕೋಟಿ ಡಾಲರ್ ವ್ಯಾಪಾರ ನಷ್ಟವಾಗಿತ್ತು. ಒಂದು ವಾರಕ್ಕೆ ಇಷ್ಟು ನಷ್ಟವಾದರೆ ತಿಂಗಳು ಕಾಲ ಈ ಜಲ ಮಾರ್ಗದಲ್ಲಿ ಸಮಸ್ಯೆಯಾದರೆ ವಿಶ್ವಕ್ಕೆ ಸಾಕಷ್ಟು ನಷ್ಟವಾಗಲಿದೆ.
ಹಾಗೆ ನೋಡಿದರೆ ಹಿಂದೆ ಸೌದಿ ಅರೇಬಿಯಾದ ಮೇಲೂ ಹೌತಿ ಉಗ್ರರು ದಾಳಿ ನಡೆಸಿದ್ದರು. ಯಾಕೆಂದರೆ ಸೌದಿಯಲ್ಲಿ ಸುನ್ನಿ ಮುಸ್ಲಿಮರಿಂದ ಹೌತಿಯಲ್ಲಿ ಶಿಯಾ ಮುಸ್ಲಿಮರಿದ್ದಾರೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋದ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ್ದರು. ಈ ಪರಿಣಾಮ ದಿಢೀರ್ ವಿಶ್ವದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು.
ಭಾರತದ ಮೇಲೆ ಆಗುವ ಪರಿಣಾಮ ಏನು?
ಹೇಗೆ ವಾಹನಗಳಿಗೆ ವಿಮೆ ಮಾಡಲಾಗುತ್ತದೋ ಅದೇ ರೀತಿ ಹಡಗಗುಗಳಿಗೆ ವಿಮೆ ಇರುತ್ತೆ. ಮೊದಲು ಈ ಮಾರ್ಗದ ಮೂಲಕ ಸಾಗುವ ಕಾರ್ಗೋ ಶಿಪ್‌ಗಳಿಗೆ 2 ಲಕ್ಷ ಡಾಲರ್ ವಿಮೆ ಇದ್ದರೆ ಈಗ 5 ಲಕ್ಷ ಡಾಲರ್‌ಗೆ ಏರಿಕೆಯಾಗಿದೆ.
ಎರಡನೇಯದಾಗಿ ಕೆಂಪು ಸಮುದ್ರದಲ್ಲಿ ಸಮಸ್ಯೆಯಾದರೆ ಹಡಗುಗಳು ಈಗ ಮಾರ್ಗವನ್ನು ಬದಲಾಯಿಸಿ ಆಫ್ರಿಕಾ ಖಂಡಕ್ಕೆ ಸುತ್ತು ಹಾಕಿ ಏಷ್ಯಾ, ಯುರೋಪ್ ದೇಶಗಳನ್ನು ತಲುಪಬೇಕಾಗುತ್ತದೆ. ಕೆಂಪು ಸಮುದ್ರದ 2 ಸಾವಿರ ಕಿ.ಮೀ ಮಾಡಬೇಕಾದ ಹಡಗು ಹತ್ತಿರ ಹತ್ತಿರ 9 ಸಾವಿರ ಕಿ.ಮೀ ಕ್ರಮಿಸಿ ದೇಶಗಳನ್ನು ತಲುಪಬೇಕಾಗುತ್ತದೆ. ಯುರೋಪ್‌ನಿಂದ 5 ವಾರದಲ್ಲಿ ಭಾರತಕ್ಕೆ ಬರುತ್ತಿದ್ದ ಹಡಗುಗಳು ಈ ಮಾರ್ಗ ಬಳಸಿದರೆ 7-8 ವಾರ ಬೇಕಾಗುತ್ತದೆ.
ಕೆಂಪು ಸಮುದ್ರದಲ್ಲಿ ಯುದ್ಧ ನಿಲ್ಲುತ್ತಾ?
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾರ ಮೇಲೆ ಬೇಕಾದರೂ ಭೂಮಿ, ವಾಯು, ಸಮುದ್ರದಿಂದ ದಾಳಿ ಮಾಡಬಹುದು. ಈಗಾಗಲೇ ಅಮೆರಿಕ ಮತ್ತು ಯುಕೆ ಯೆಮೆನ್‌ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಅಮೆರಿಕ ಮತ್ತು ಯುಕೆಯ ಯುದ್ಧ ನೌಕೆ ಹಡಗುಗಳು ಕೆಂಪು ಸಮುದ್ರದದಲ್ಲಿ ಬಿಡು ಬಿಟ್ಟಿವೆ. ಇರಾನ್ ಹೌತಿ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಮಿಲಿಟರಿಯಲ್ಲಿ ಸೂಪರ್ ಪವರ್ ದೇಶಗಳಾಗಿವೆ. ಹೀಗಾಗಿ ಹೌತಿ ಉಗ್ರರನ್ನು ಸದೆ ಬಡೆಯುವುದು ಕಷ್ಟದ ಕೆಲಸ ಏನಲ್ಲ. ಈ ಕಿತ್ತಾಟದ ಮಧ್ಯೆ ಇರಾನ್ ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ಉಲ್ಭಣವಾಗುವ ಸಾಧ್ಯತೆಯಿದೆ.