ಗದಗ: ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ರಂಗುರಂಗಿನ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ (Laxmeshwara) ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗುಂಡೇಶ್ವರ ಕೆರೆಯಲ್ಲಿ ದೇವೇಂದ್ರ ರಾಚನಗೌಡ (16) ಮೃತಪಟ್ಟಿದ್ದಾನೆ. ದೇವೇಂದ್ರ ಬೆಳಗ್ಗೆಯಿಂದ ಸ್ನೇಹಿತರೊಂದಿಗೆ ಊರಲ್ಲಿ ಬಣ್ಣದ ಹೋಳಿ ಆಟವಾಡಿದ್ದಾನೆ. ನಂತರ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಕೆರೆಗೆ ಈಜಲು ಹೋಗಿದ್ದರು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ವೃದ್ದ ಸಾವು..? – 2 ಗ್ರಾಮಗಳ ಜನರಿಗೆ ವಾಂತಿ ಭೇದಿ ಮೈ-ಕೈ ನೋವು
ಮೂರು ಜನ ದಡದಲ್ಲಿ ಸ್ನಾನ ಮಾಡಿದ್ದಾರೆ. ಆದರೆ ದೇವೇಂದ್ರ ಒಂದು ದಡದಿಂದ ಮತ್ತೊಂದು ದಡ ತಲುಪುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಕೆರೆಯ ಮಧ್ಯಭಾಗದ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾನೆ. ಜೊತೆಗೆ ಹೋಗಿದ್ದ ಸ್ನೇಹಿತರ ಮಾಹಿತಿಯ ಆಧಾರದ ಮೇರೆಗೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕನಿಗಾಗಿ ಶೋಧ ಕಾರ್ಯನಡೆಸಿದರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತ ದೇಹ ಹೊರತೆಗೆದಿದ್ದಾರೆ. ಹಬ್ಬದ ಸಂಭ್ರಮದ ದಿನದಂದು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ