ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್ (Waqf Board) ನೂತನ ಅಧ್ಯಕ್ಷರ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ (Congress) ಜಟಾಪಟಿ ನಡೆದು ಕೊನೆಗೆ ಕಲಬುರಗಿಯ ಹಝ್ರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಸಜ್ಜಾದ ನಶೀನ್ ಸೈಯದ್ ಮುಹಮ್ಮದ್ ಅಲಿ ಹುಸೈನಿ (Syed Muhammad Ali Hussaini) ಅವರು ಆಯ್ಕೆಯಾಗಿದ್ದಾರೆ.
ಮುಹಮ್ಮದ್ ಅಲಿ ಹುಸೈನಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ (Syed Naseer Hussain) ಅವರ ಬೆಂಬಲಿಗರಾಗಿದ್ದಾರೆ. ಶನಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸೈಯದ್ ಮುಹಮ್ಮದ್ ಅಲಿ ಹುಸೈನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ
ಚುನಾವಣೆಗೆ ಮೊದಲು ಚಿತ್ರದುರ್ಗದ (Chitradurga) ಅನ್ವರ್ ಪಾಷಾ ಪರವಾಗಿ ವಕ್ಫ್ ಸಚಿವ ಜಮೀರ್ ಅಹಮ್ಮದ್ (Zameer Ahmed Khan) ಲಾಬಿ ಮಾಡಿದ್ದರು. ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಸೂತ್ರದಂತೆ ಅಧ್ಯಕ್ಷ ಸ್ಥಾನ ನಮ್ಮ ಬೆಂಬಲಿಗನಿಗೆ ಕೊಡಿಸಿ ಎಂದು ಜಮೀರ್ ಲಾಬಿ ಮಾಡಿದ್ದರು. ಏನಾದರೂ ಸಹಾಯ ಮಾಡಲು ಆಗುತ್ತಾ ಎಂದು ಶುಕ್ರವಾರ ರಾತ್ರಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಜಮೀರ್ ಮನವಿ ಮಾಡಿದ್ದರು. ಆದರೆ ಸಿಎಂ ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆ ನಿನ್ನ ಸಮುದಾಯದ ವಿಚಾರವಾಗಿದ್ದು ನಿಯಮದಂತೆ ಆಯ್ಕೆ ನಡೆಯಲಿ ಎಂದು ಸೂಚಿಸಿ ಕಳುಹಿಸಿದ್ದರು.
ಜಮೀರ್ ಬೇಡಿಕೆಗೆ ಒಪ್ಪಿಗೆ ಸಿಗದ ಕಾರಣ ಇಂದು ಅಧ್ಯಕ್ಷರಾಗಿ ಖರ್ಗೆ ಬೆಂಬಲಿಗ ಬಹುಮತದೊಂದಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಬಾಷಾ ನೇತೃತ್ವದಲ್ಲಿ ಆರು ಮಂದಿ ಸದಸ್ಯರು ಮತದಾನ ಬಹಿಷ್ಕರಿಸಿದ್ದರು. ಇದನ್ನೂ ಓದಿ: Gold Smuggling Case| ಪ್ರಭಾವಿ ನಾಯಕನ ಮೇಲೆ ಜರ್ಮನಿ ಟೂರ್ ಬಗ್ಗೆ ಅನುಮಾನ
ವಕ್ಫ್ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಹುಸೈನಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಖರ್ಗೆ ಆಪ್ತ ನಾಸೀರ್ ಹುಸೇನ್ ಹಾಜರಾಗಿದ್ದರೆ ಅಸಮಾಧಾನದಿಂದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಹಾಜರಾಗದೇ ಜಮೀರ್ ಅಹಮ್ಮದ್ ಅಂತರ ಕಾಯ್ದುಕೊಂಡಿದ್ದರು.