ಲಕ್ನೋ: ಲಿವ್‍ಇನ್ ರಿಲೇಶನ್‍ಶಿಪ್‌ನಲ್ಲಿದ್ದಾಗ (Live In Relationship) ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ.
ಹಮೀರ್‌ಪುರದ ನಿವಾಸಿ ಶೈಲೇಂದ್ರ ಗುಪ್ತಾ ಹಲ್ಲೆಗೊಳಗಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆತ ಮಹೋಬಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಕಾಲಿಪಹರಿ ಗ್ರಾಮದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ. ಈ ಸಮಯದಲ್ಲಿ ಮಹಿಳೆಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ಆಭರಣಗಳನ್ನು ಕೊಡಿಸಿದ್ದ. ಅಲ್ಲದೇ 4 ಲಕ್ಷ ರೂ. ನಗದು ಹಣ ನೀಡಿದ್ದ. ಇತ್ತೀಚೆಗೆ ಮಹಿಳೆ ಬೇರೊಬ್ಬನ ಸಂಪರ್ಕದಲ್ಲಿದ್ದಳು. ಬಳಿಕ ಶೈಲೇಂದ್ರ ಹಾಗೂ ಮಹಿಳೆ ದೂರವಾಗಿದ್ದರು.
ಇದಾದ ಬಳಿಕ ಶೈಲೇಂದ್ರ ಹಿಂದೆ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದ. ಹಣ ಮತ್ತು ಆಭರಣ ಮರಳಿ ಪಡೆಯಲು ಅವರ ಮನೆಗೆ ತೆರಳಿದ್ದಾಗ, ಮಹಿಳೆ, ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್ ಮತ್ತು ಹ್ಯಾಪಿ ಎಂಬವರ ಜೊತೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ. ದಾಳಿಯ ನಂತರ, ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು ಹಣ ಒಡವೆ ಹಿಂದಿರುಗಿಸುವಂತೆ ಒತ್ತಾಯಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಪ್ರೇಯಸಿಯ ವಿರುದ್ಧ ಶೈಲೇಂದ್ರ ಆರೋಪಿಸಿದ್ದಾನೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.