ಮಂಗಳೂರು: ಬೃಹತ್ ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಕರಾವಳಿಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಮತ್ತೆ ಆಕ್ಟಿವ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೇರಳ ಮೂಲದ ನಟೋರಿಯಸ್ ವೆಪೆನ್ ಡೀಲರ್ ಸೇರಿದಂತೆ ಐವರನ್ನು ಮಂಗಳೂರು ಸಿಸಿಬಿ ಬಂಧಿಸಿದೆ. ಕೇರಳದ ಮೂಲದ ಕ್ರಿಮಿನಲ್‌ಗಳಾದ ಅಬ್ದುಲ್ ಲತೀಫ್, ಮನ್ಸೂರು, ನೌಫಾಲ್, ಮಹಮ್ಮದ್ ಅಸ್ಗರ್, ಮಹಮ್ಮದ್ ಸಾಲಿ ಬಂಧಿತರು.
ಬಂಧಿತರಿಂದ ಮೂರು ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ಬೃಹತ್ ಅಕ್ರಮ ಪಿಸ್ತೂಲ್ ಸರಬರಾಜು ನಡೆಯುತ್ತಿತ್ತು. ಸಮಾಜಘಾತುಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಸರಬರಾಜಾಗುತ್ತಿತ್ತು.
ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ ಪಿಸ್ತೂಲ್ ನೀಡಿದ್ದ. ಪಿಎಫ್‌ಐ ಕ್ಯಾಡರ್‌ಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ. ವಾಮಂಜೂರುನಲ್ಲಿ ಜ.6ರಂದು ನಡೆದಿದ್ದ ಮಿಸ್ ಫೈಯರ್ ಪ್ರಕರಣದಲ್ಲಿ ಬಂಧಿತರಿಗೆ ಈತನೇ ಪಿಸ್ತೂಲ್ ನೀಡಿದ್ದ. ಮಿಸ್ ಫೈಯರ್ ಪ್ರಕರಣದಲ್ಲಿ ಬಂಧಿತ ಬದ್ರುದ್ದೀನ್ ಮತ್ತು ಇಮ್ರಾನ್ ಇಬ್ಬರೂ ನಿಷೇಧಿತ PFI ಮುಖಂಡರು. ಕೇರಳದಲ್ಲಿ ನಿಷೇಧಿತ PFI ಸಂಘಟನೆಯೊಂದಿಗೆ ಆರೋಪಿಗಳು ನೇರ ಸಂಬಂಧ ಹೊಂದಿದ್ದಾರೆ.
ನಿಷೇಧಿತ PFI ಮುಖಂಡರ ಕೈಗೆ ಪಿಸ್ತೂಲ್ ಬಂದಿದ್ದಾದರೂ ಏಕೆ? ಮಂಗಳೂರು PFI ಮುಖಂಡರ ಅಸಲಿ ಟಾರ್ಗೆಟ್ ಯಾರು? ಕೇರಳದಿಂದ ಪಿಸ್ತೂಲ್ ಮಂಗಳೂರಿಗೆ ಬಂದಿದ್ದಾದರೂ ಏಕೆ? ಅಬ್ದುಲ್ ಲತೀಫ್ ಇನ್ನೂ ಹಲವೆಡೆ ಪಿಸ್ತೂಲ್ ಸರಬರಾಜು ಮಾಡಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.