IPL 2025 | ಈವರೆಗೆ ಚುಟುಕು ಕದನದಲ್ಲಿ ಟ್ರೋಫಿ ಗೆದ್ದ ಚಾಂಪಿಯನ್ಸ್‌ ಯಾರು?

Public TV
3 Min Read
ipl winners

18ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್ 22ರಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. 2025ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವೆ ನಡೆಯಲಿದೆ. ಇನ್ನೂ ಮೊದಲ ಸೂಪರ್‌ ಸಂಡೇನಲ್ಲಿ ತಲಾ 5 ಬಾರಿ ಚಾಂಪಿಯನ್‌ಗಳಾಗಿರುವ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಲಿವೆ. ಇದೀಗ 17 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿ 18ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…

2008ರಲ್ಲಿ ಆರಂಭಗೊಂಡ ಐಪಿಎಲ್‌ ಟೂರ್ನಿ 2024ರ ವರೆಗೆ 17 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ 18ನೇ ಆವೃತ್ತಿಗೆ ಸಜ್ಜಾಗಿದೆ. ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 7 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ ನಾಲ್ಕು ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.

rajasthan royals

ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್ಸ್‌
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್‌ ವಾರ್ನ್‌ ತಂಡದ ನಾಯಕತ್ವ ವಹಿಸಿದ್ದರು.

deccan chargers

2009ರಲ್ಲಿ ಡೆಕ್ಕನ್‌ ಚಾರ್ಜಸ್‌ಗೆ ಕಿರೀಟ
2009ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್‌ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್‌ ಚಾರ್ಜಸ್‌ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್‌ ಪ್ರಶಸ್ತಿ ಗೆದ್ದುಕೊಂಡಿತು.

csk

5 ಬಾರಿ ಚೆನ್ನೈ ʻಸೂಪರ್‌ʼ ಚಾಂಪಿಯನ್‌
ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್‌ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್‌ ಕಿಂಗ್ಸ್‌. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್‌ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

mumbai indians

ಮುಂಬೈಗೂ 5 ಬಾರಿ ಕಿರೀಟ:
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಂತೆ ಮುಂಬೈ ಇಂಡಿಯನ್ಸ್‌ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ನಾಯಕನಾಗಿದ್ದಾರೆ.

kkr

ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 3 ಬಾರಿ ಪಟ್ಟ:
2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್‌ ಆಗಿದೆ. 2012, 2014 ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್‌, 2024 ರಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್‌ ಆಗಿದ್ದು ಗೌತಮ್‌ ಗಂಭೀರ್‌ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.

srh win

ಸನ್‌ ರೈಸರ್ಸ್‌ 2016ರ ಚಾಂಪಿಯನ್
2016ರ ರೋಚಕ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್‌ ವಾರ್ನರ್‌ ತಂಡದ ನಾಯಕತ್ವ ವಹಿಸಿದ್ದರು.

gt

ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್‌
ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.

RCBvsGT 6

ಈವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಜೊತೆಗೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕಸ್ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.

Share This Article