ತನ್ನ ಜೀವನ ನಿರ್ವಹಣೆಗಾಗಿ ಹಿಡಿದದ್ದು ಆಟೋ ಓಡಿಸುವ ಕೆಲಸ. ಈಗ ತನ್ನ ಜೀವನ ನಡೆಸುವ ಜೊತೆ ಜೊತೆಗೆ ನೂರಾರು ಮಹಿಳೆಯರಿಗೂ ದಾರಿ ದೀಪವಾಗಿದ್ದಾರೆ.
ಇವರ ಹೆಸರು ಪ್ರಭಾವತಿ. ಆದರೆ ಇವರಿಗೆ ಜನ ಕೊಟ್ಟಿರುವುದು ಡಬಲ್ ಸ್ಟಾರ್ ಪ್ರಭಾವತಿ ಎಂಬ ಪಟ್ಟ. ಹೇಗಾದ್ರೂ ಮಾಡಿ ಜೀವನ ಸಾಗಿಸಬೇಕು ಅನಿವಾರ್ಯತೆಗೆ ಬಿದ್ದ ಬೆಂಗಳೂರಿನ ಪ್ರಭಾವತಿ ಕೈಹಿಡಿದು ಬದುಕು ಕೊಟ್ಟಿದ್ದು ಆಟೋ.
ಆರಂಭದಲ್ಲಿ ಆಟೋ ಕಲಿಯಬೇಕು ಅಂದಾಗ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಆಟೋ ಓಡಿಸಿ ತಮ್ಮ ಬದುಕು ಕಟ್ಟಿಕೊಂಡ್ರು. ಅಲ್ಲಿಗೆ ಸುಮ್ಮನಾಗದ ಇವರು ತಮ್ಮಂತೆ ಅನಿವಾರ್ಯತೆ ಇದ್ದ ಹೆಣ್ಣುಮಕ್ಕಳಿಗೆ ಉಚಿತ ಆಟೋ ತರಬೇತಿ ಶುರು ಮಾಡಿದರು. ಕಳೆದ ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ತರಬೇತಿ ನೀಡಿ ಜೀವನಕ್ಕೆ ದಾರಿ ಮಾಡಿದ್ದಾರೆ.
ಕಷ್ಟದಲ್ಲಿದ್ದ ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ಜೀವನ ಪಾಠ ಹೇಳುತ್ತಿರುವ ಡಬಲ್ ಸ್ಟಾರ್ ಪ್ರಭಾವತಿ ನಿಜಕ್ಕೂ ಸ್ಫೂರ್ತಿ. ಈ ಅಪರೂಪದ ಸಾಧಕಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.