ಮೈಸೂರು: ಜಿಲ್ಲೆಯ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಕಟ್ಟಿಸುತ್ತಿರುವ ಮನೆಯ ಗೃಹ ಪ್ರವೇಶದ ಹಿನ್ನೆಲೆ ಮನೆ ಎದುರಿಗಿದ್ದ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದ ಮಹಾನಗರ ಪಾಲಿಕೆ, ಇದೀಗ `ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ವ್ಯಾಪಾರ ರಹಿತ ವಲಯ ಬೋರ್ಡ್‌ನ್ನು (non-business zone board) ತೆಗೆದುಹಾಕಿದೆ.
ಹೌದು, ಜಿಲ್ಲೆಯ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮನೆ ಕಟ್ಟಿಸುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಗೃಹ ಪ್ರವೇಶ ನಡೆಯಲಿದ್ದು, ಮನೆಯ ಕೂಗಳತೆ ದೂರದಲ್ಲಿರುವ ತರಕಾರಿ, ಟೀ, ಫಾಸ್ಟ್‌ಫುಡ್ ಅಂಗಡಿಗಳ ತೆರವಿಗೆ ನಗರ ಪಾಲಿಕೆ ಮುಂದಾಗಿತ್ತು. ಜೊತೆಗೆ ರಸ್ತೆಯ ಬೀದಿಬದಿ ವ್ಯಾಪಾರಸ್ಥರ ಅಂಗಡಿ ತೆರವಿಗೆ ನೋಟಿಸ್ ನೀಡಿತ್ತು.ಇದನ್ನೂ ಓದಿ: ಇನ್ನೆರಡು ತಿಂಗಳಲ್ಲಿ ಸಿಎಂ ಮನೆ ಗೃಹಪ್ರವೇಶ – ಮನೆಗೆ 100 ಮೀ ದೂರದಲ್ಲಿದ್ದ ತರಕಾರಿ, ಫಾಸ್ಟ್‌ಫುಡ್ ಅಂಗಡಿ ತೆರವು
ನಗರ ಪಾಲಿಕೆಯಿಂದ ದಿಢೀರ್ ಫುಟ್‌ಪಾತ್ ತೆರವು ಹೆಸರಲ್ಲಿ ಮನೆಯ ಕೂಗಳತೆ ದೂರದಲ್ಲಿರುವ 20ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಿಸಿದ್ದರು. ಮೈಸೂರಿನಲ್ಲಿ ಅತಿ ಹೆಚ್ಚು ಜನ ಓಡಾಡುವ ಸಯ್ಯಾಜಿರಾವ್ ರಸ್ತೆಯಲ್ಲೇ ಫುಟ್‌ಪಾತ್‌ನಲ್ಲಿ ತೆರವು ಮಾಡುತ್ತಿಲ್ಲ. ಮೈಸೂರಿನ ದೇವರಾಜ ಮಾರ್ಕೆಟ್, ಬಂಬೂ ಬಜಾರ್ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತಾ ಫುಟ್‌ಪಾತ್‌ನಲ್ಲಿ ವ್ಯಾಪಾರ ಜೋರಿದೆ. ಯಾವ ರಸ್ತೆಯ ಮೇಲೂ ಪ್ರಯೋಗ ಆಗದ ತೆರವಿನ ಕಾರ್ಯ ವಿಶ್ವಮಾನವ ಜೋಡಿ ರಸ್ತೆ ಮೇಲೆ ಮಾಡಲಾಗುತ್ತಿದೆ. ಸಿಎಂ ಮನೆ ಕಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲದ ನೆಪ ಹೇಳಿ ಅಂಗಡಿ ತೆರವು ಮಾಡುತ್ತಿದ್ದಾರೆ ಎಂದು ಪಾಲಿಕೆಯ ಈ ನಿರ್ಧಾರಕ್ಕೆ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದರು.
ಈ ಕುರಿತು `ಪಬ್ಲಿಕ್ ಟಿವಿ’ ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ವರದಿಯ ಬೆನ್ನಲ್ಲೇ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಇದೀಗ ನೋಟಿಸ್ ಹಿಂಪಡೆಯಲು ಮುಂದಾಗಿದ್ದು, ಸ್ಥಳದಲ್ಲಿ ವ್ಯಾಪಾರ ರಹಿತ ವಲಯ ಬೋರ್ಡ್‌ನ್ನು ತೆಗೆದುಹಾಕಿದೆ. ಇದರಿಂದ ಅಲ್ಲಿನ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದು, `ಪಬ್ಲಿಕ್ ಟಿವಿ’ಗೆ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ವಿಜಯಪುರ ಕಾನ್ಸ್‌ಟೇಬಲ್ ಭಾವುಕ ಪೋಸ್ಟ್ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ