ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ ಇನ್ನು ಟೈಟ್ ಮಾಡಿಯೇನು ಪ್ರಯೋಜನ: ಜಗ್ಗೇಶ್

Public TV
3 Min Read
JAGGESH

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್‌ವುಡ್ ನಟರಿಗೆ ಡಿಸಿಎಂ ಡಿಕೆಶಿ (DK Shivakumar) ವಾರ್ನಿಂಗ್ ಕೊಟ್ಟಿರೋದು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಯಾರಿಗೆ ಹೇಗೆ ನೆಟ್ಟು ಬೋಲ್ಟು ಸರಿ ಮಾಡಬೇಕು ಎಂದು ಗೊತ್ತಿದೆ ಎಂದು ಖಾರವಾಗಿ ಮಾತನಾಡಿದ್ದ ಡಿಕೆಶಿ ಹೇಳಿಕೆಗೆ ಈಗ ನಟ ಜಗ್ಗೇಶ್ (Jaggesh) ಪ್ರತಿಕ್ರಿಯೆ ನೀಡಿದ್ದಾರೆ. ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೇ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ ಎಂದಿದ್ದಾರೆ.

jaggesh

ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಕ್ರಮ ಇದ್ದಿದ್ದು 7 ಗಂಟೆಗೆ ನನಗೆ ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ, ಜೊತೆಗೆ ಒಗಟ್ಟಿಲ್ಲ ಸಂವಾದವಿಲ್ಲ ಒಟ್ಟಾರೆ ಕಲಾವಿದರ ಸಂಘವೇ ಕಣ್ಮರೆಯಾಗಿದೆ. ಕನ್ನಡ ಚಿತ್ರರಂಗ ಅವಸಾನ ಕರ್ನಾಟಕದಲ್ಲಿ. ಯಾವ ಕಲಾವಿದರು ಏನಾಗಿದ್ದಾರೆ ಕಲಾವಿದರಾದ ನಮಗೆ ಮಾಹಿತಿಯಿಲ್ಲ. ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಒಂದು ಕಮಿಟಿ ಮಾಡಿ ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು, ಇರುವಂತೆ ರಚಿಸಿ. ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ.ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೇಳಿದ್ದಾರೆ. ಇದನ್ನೂ ಓದಿ:ಡಿಸಿಎಂಗೆ ಜವಾಬ್ದಾರಿ ಇದೆ: ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಹೇಮಾ ಚೌಧರಿ ರಿಯಾಕ್ಷನ್

ಕಲಾವಿದರು ಒಟ್ಟುಗೂಡಲೆಂದೆ ಡಾ.ರಾಜಕುಮಾರ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ. ನಿಮ್ಮ ಗಮನಕ್ಕಾಗಿ ತಂದಿರುವೆ ಎಂದೂ ಬರೆದುಕೊಂಡಿದ್ದಾರೆ.

jaggesh

ಅಂದಹಾಗೆ, ನಿನ್ನೆ ನಡೆದ 16ನೇ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ ಬಗ್ಗೆ ಹೇಳಿದರು.

ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ, ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ. ಅನುಮತಿ ಕೊಡಲಿಲ್ಲ ಅಂದ್ರೆ ಶೂಟಿಂಗ್ ಮಾಡೋಕೆ ಆಗಲ್ಲ, ಯಾರು ಯಾರಿಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಅಂತ ಗೊತ್ತಿದೆ ಎಂದು ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.

Share This Article