ಪಂಜಾಬ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಇಲಾಖೆಗೆ 20 ತಿಂಗಳು ಸಚಿವರಾಗಿದ್ದ ಕುಲ್ದೀಪ್‌ ಸಿಂಗ್‌

Public TV
1 Min Read
Kuldeep Singh Dhaliwal

ಚಂಡೀಗಢ: ಪಂಜಾಬ್‌ನಲ್ಲಿ (Punjab) ಅಸ್ತಿತ್ವದಲ್ಲೇ ಇಲ್ಲದ ಇಲಾಖೆಗೆ ಕುಲ್ದೀಪ್ ಸಿಂಗ್‌ ಧಲಿವಾಲ್‌ (Kuldeep Singh Dhaliwal) ಅವರು 20 ತಿಂಗಳು ಸಚಿವರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಧಲಿವಾಲ್ ಅವರು ಸುಮಾರು 20 ತಿಂಗಳಿನಿಂದ ಸಚಿವಾಲಯದಲ್ಲಿ ಅಸ್ತಿತ್ವದಲ್ಲಿಲ್ಲದ ಇಲಾಖೆಯನ್ನು ನಿರ್ವಹಿಸಿರುವುದು ಕಂಡುಬಂದಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಗೆಜೆಟ್ ಅಧಿಸೂಚನೆಯನ್ನು ಉಲ್ಲೇಖಿಸಿ ವರದಿಯೊಂದು ಪ್ರಕಟವಾಗಿದೆ.

Bhagwant Mann

ಮಂತ್ರಿಗಳಿಗೆ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ಹಿಂದಿನ ಅಧಿಸೂಚನೆಯ ಭಾಗಶಃ ಮಾರ್ಪಾಡಿನಲ್ಲಿ, ಧಲಿವಾಲ್‌ಗೆ ಮೊದಲು ಹಂಚಿಕೆಯಾಗಿದ್ದ ಆಡಳಿತ ಸುಧಾರಣಾ ಇಲಾಖೆಯು ಇಲ್ಲಿಯವರೆಗೆ ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಮ್ ಆದ್ಮಿ ಪಕ್ಷದ ನಾಯಕ ಕುಲದೀಪ್ ಸಿಂಗ್ ಧಲಿವಾಲ್ ಈಗ ಪಂಜಾಬ್ ಸಂಪುಟದಲ್ಲಿ ಎನ್‌ಆರ್‌ಐ ವ್ಯವಹಾರಗಳ ಖಾತೆಯನ್ನು ಮಾತ್ರ ಹೊಂದಿರುತ್ತಾರೆ.

ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ ಅವರ ಆದೇಶದ ಮೇರೆಗೆ ಧಲಿವಾಲ್ ಅವರ ಖಾತೆಯನ್ನು ತಿದ್ದುಪಡಿ ಮಾಡುವ ನಿರ್ಧಾರವು ಫೆ.7 ರಿಂದ ಜಾರಿಗೆ ಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಧಲಿವಾಲ್ ಅವರು ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಹೊಂದಿದ್ದರು. 2023 ರ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಪುನಾರಚನೆಯ ಸಮಯದಲ್ಲಿ ಅವರನ್ನು ಅಲ್ಲಿಂದ ವರ್ಗಾಯಿಸಲಾಯಿತು. ಇದಾದ ನಂತರ, ಅವರಿಗೆ ಆಡಳಿತ ಸುಧಾರಣಾ ಖಾತೆಯನ್ನು ನೀಡಲಾಗಿತ್ತು.

2024 ರ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಸಚಿವ ಸಂಪುಟ ಪುನಾರಚನೆಯ ನಂತರವೂ, ಧಲಿವಾಲ್ ಅವರು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದ ಇಲಾಖೆಯನ್ನು ತಮ್ಮದಾಗಿಸಿಕೊಂಡರು.

ಆಡಳಿತ ಸುಧಾರಣಾ ಇಲಾಖೆಗೆ ಯಾವುದೇ ಸಿಬ್ಬಂದಿಯನ್ನು ನಿಯೋಜಿಸಲಾಗಿಲ್ಲ. ಅವರು ಯಾವುದೇ ಸಭೆಗಳನ್ನು ನಡೆಸಿಲ್ಲ ಎಂದು ಹೆಸರು ಬಹಿರಂಗಪಡಿಸದ ಮೂಲಗಳು ತಿಳಿಸಿವೆ.

Share This Article