ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ: ಶಿವರಾಮ್ ಹೆಬ್ಬಾರ್

Public TV
1 Min Read
shivaram hebbar

ಕಾರವಾರ: ಬಿಜೆಪಿಯಲ್ಲಿ ಎಷ್ಟು ಬಣ ಆಗಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಬಣಗಳನ್ನು ಲೆಕ್ಕ ಮಾಡುತಿದ್ದೇನೆ. ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ ಎಂದು ಬಿಜೆಪಿ ರೆಬಲ್ ಶಾಸಕ, ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಯಾರ‍್ಯಾರ ನಿಲುವು ಸರಿ, ಯಾರ‍್ಯಾರ ನಿಲುವು ತಪ್ಪು ಎನ್ನುವುದು ಇನ್ನೂ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ನಾನು ಮತ್ತು ಸೋಮಶೇಖರ್ ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ವಿಜಯೇಂದ್ರ ಹಾಗೂ ಯತ್ನಾಳ್ ಸಹ ಹೇಳಿದ್ದರು. ಯಾರ‍್ಯಾರು ನಾವು ತಪ್ಪು ಎಂದು ಹೇಳಿದವರೆಲ್ಲ ಅವರೇ ತಪ್ಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ವಿವಾದಕ್ಕೆ ಬೀಳಬಾರದು ಎಂದು ನಾನು ಸುಮ್ಮನಿದ್ದೇನೆ. ಯಾವಾಗ ವಿವಾದದಲ್ಲಿ ಬೀಳಬೇಕು ಎನಿಸುತ್ತದೆಯೋ ಅಂದು ಬೀಳುತ್ತೇನೆ ಎಂದು ಅಧ್ಯಕ್ಷ ಸ್ಥಾನದ ಕುರಿತು ಬಿಜೆಪಿ ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಗ್ಯಾರಂಟಿ ಯೋಜನೆಯಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನ ದೊರೆಯದ ಕುರಿತು ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಮೇಲೆ ಪರಿಣಾಮವಾಗಿತ್ತು. ಇದೀಗ ಎಲ್ಲ ಸರಿಯಾಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಇದಕ್ಕಾಗಿ ಇಂತಹ ಯೋಜನೆ ಕೊಡುವುದು ಅನಿವಾರ್ಯ. ಗ್ಯಾರಂಟಿ ಟೀಕೆ ಮಾಡಿದ ಬಿಜೆಪಿ ಮುಂಬೈ, ದೆಹಲಿಯಲ್ಲಿ ಏನು ಮಾಡಿತು ಎಂದು ಪ್ರಶ್ನೆ ಮಾಡಿದ್ದಾರೆ.

Share This Article