ಎಲ್ಲೋ ಜೋಗಪ್ಪ ನಿನ್ನರಮನೆ – ಭರತನಾಟ್ಯ ಪ್ರವೀಣೆಗೊಲಿದ ಚೆಂದದ ಪಾತ್ರ!

Public TV
2 Min Read
Yello Jogappa Nin Aramane

ವಿಭಿನ್ನ ಕಥನದ ಸುಳಿವಿನೊಂದಿಗೆ ಎಲ್ಲರನ್ನೂ ಸೆಳೆದುಕೊಂಡಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ (Yello Jogappa Nin Aramane Movie) ಈ ವಾರ ಅಂದರೆ ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಕಿರುತೆರೆಯಲ್ಲಿ ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಸೀರಿಯಲ್‌ಗಳ ಮೂಲಕ ಯಶಸ್ವಿ ನಿರ್ದೇಶಕರು ಅನ್ನಿಸಿಕೊಂಡಿರುವ ಹಯವದನ (Hayavadana) ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.

628A5246 scaled

ಒಂದು ಅಪರೂಪದ ಕಥಾನಕದೊಂದಿಗೆ ಅವರು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುವ ಸುಳಿವು ಟ್ರೈಲರ್ ಮೂಲಕ ನಿಖರವಾಗಿಯೇ ಸಿಕ್ಕಿದೆ. ಅಂಜನ್ ನಾಗೇಂದ್ರ (Anjan Nagendra) ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಮಂಗಳೂರು ಹುಡುಗಿ ವೆನ್ಯಾ ರೈ (Venya rai) ಹಾಗೂ ಭರತನಾಟ್ಯ ಪ್ರವೀಣೆ ಸಂಜನಾ ದಾಸ್ ನಾಯಕಿಯರಾಗಿ ನಟಿಸಿದ್ದಾರೆ.

628A5162 scaled

ನಿರ್ದೇಶಕ ಹಯವದನ ಅವರು ವರ್ಷಗಟ್ಟಲೆ ಶ್ರಮ ವಹಿಸಿ ಈ ಸಿನಿಮಾದ ಕಥೆಯನ್ನು ಸಿದ್ಧ ಪಡಿಸಿದ್ದಾರೆ. ಅಷ್ಟೇ ಶ್ರದ್ಧೆಯಿಂದ, ಸೂಕ್ಷ್ಮತೆಯಿಂದ ಈ ಸಿನಿಮಾದ ಪ್ರತೀ ಪಾತ್ರಗಳಿಗೆ ಒಪ್ಪುವಂಥಾ ನಟ ನಟಿಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಥಾದ್ದೊಂದು ಜವಾಬ್ದಾರಿಯುತ ಹುಡುಕಾಟದಲ್ಲಿ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಕೆ ಸಂಜನಾ ದಾಸ್. ಈಕೆ ಈ ಹಿಂದೆ ಕೇಟಿಎಂ ಅಂತೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾದ ಟೀಸರ್ ನೋಡಿದ್ದ ಹಯವದನ ಅವರಿಗೆ ಈ ಸಿನಿಮಾದ ಒಂದು ಪಾತ್ರಕ್ಕೆ ಈ ಹುಡುಗಿಯೇ ಸೂಕ್ತ ಅಂತನ್ನಿಸಿದ್ದೇ ಸಂಜನಾರ ಲಕ್ಕು ಕುದುರಿದಂತಾಗಿದೆ.

ಅಂದಹಾಗೆ, ಸಂಜನಾ ದಾಸ್ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ತಮಿಳು ಹುಡುಗಿಯಾಗಿ ನಟಿಸಿದ್ದಾರೆ. ಅಡ್ವೆಂಚರ್ ಅನ್ನು ಇಷ್ಟಪಡುವ ಲವಲವಿಕೆಯ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿಯೇ ಅವರು ಜೀವ ತುಂಬಿದ್ದಾರೆ. ಸಂಜನಾ ಪಾತ್ರದ ಚಿತ್ರೀಕರಣ ಮನಾಲಿಯಲ್ಲಿ ನಡೆದಿದೆ. ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಸಂಜನಾ ಪಾಲಿಗೆ ನಟನೆ ಎಂಬುದು ಎಳವೆಯಿಂದಲೇ ಆವರಿಸಿಕೊಂಡಿದ್ದ ಸೆಳೆತ. ತಾನು ನಿರ್ವಹಿಸಬಹುದಾದ ಪಾತ್ರಗಳ ಬಗ್ಗೆ ಸಹಜವಾಗಿಯೇ ಒಂದಷ್ಟು ಕಲ್ಪನೆಗಳು ಸಂಜನಾಗಿದ್ದವು. ಅಂಥದ್ದೊಂದು ಪಾತ್ರ ಎಲ್ಲೋ ಜೋಗಪ್ಪ ನಿನ್ನರಮನೆ ಮೂಲಕ ಒಲಿದು ಬಂದ ಬಗ್ಗೆ ಆಕೆ ಥ್ರಿಲ್ ಆಗಿದ್ದಾರಂತೆ.

628A5040 scaled

ನಟಿಯಾಗಬೇಕೆಂಬ ಬಯಕೆಯಿಂದ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸ್ಕೂಲಿನಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಂಡಿದ್ದವರು ಸಂಜನಾ ದಾಸ್. ಆ ಅನುಭವವೆಲ್ಲ ಈ ಸಿನಿಮಾ ಪಾತ್ರ ಪೋಷಣೆಯಲ್ಲಿ ಸಹಕಾರಿಯಾಗಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 21ರಂದು ತೆರೆಗಾಣಲಿದೆ.

Share This Article