Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

Public TV
3 Min Read
Jagmohan Dalmiya
  • ಚಾಂಪಿಯನ್ಸ್‌ ಟ್ರೋಫಿ ಜನ್ಮತಾಳಿದ್ದು ಹೇಗೆ?

  • ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ

ಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಬಾರಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಇಂದಿನಿಂದ ಆರಂಭವಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಭಾರತದ ಮಟ್ಟಿಗೆ ತಾರಾಮಣಿಗಳಿಗೆ ತಮ್ಮ ನೈಜ ಸಾಮರ್ಥ್ಯಕ್ಕೆ ಮರಳುವ ಒತ್ತಡ ತಂದೊಡ್ಡಿದ್ದರೆ, ನವಪ್ರತಿಭೆಗಳಿಗೆ ಹೆಜ್ಜೆಗುರುತು ಮೂಡಿಸುವ ತವಕ ಹೆಚ್ಚಾಗಿದೆ. ಈ ಹೊತ್ತಿನಲ್ಲಿ ಚಾಂಪಿಯನ್ಸ್‌ ಟ್ರೋಫಿ ಜನ್ಮ ತಾಳಿದ್ದು ಹೇಗೆ? ಚೊಚ್ಚ ಟ್ರೋಫಿ ಗೆದ್ದವರು ಯಾರು? ಇದೆಲ್ಲ ಇತಿಹಾಸ ತಿಳಿಯುವುದು ಮುಖ್ಯವಾಗಿದೆ.

Pak vs Nz

ದಾಲ್ಮೀಯಾರ ಕನಸಿನ ಕೂಸು:
ಚಾಂಪಿಯನ್ಸ್ ಟ್ರೋಫಿ 1990ರ ದಶಕದ ಅಂತ್ಯದಲ್ಲಿ ಐಸಿಸಿ ಅಧ್ಯಕ್ಷರಾಗಿದ್ದ, ಭಾರತದ ಖ್ಯಾತ ಉದ್ಯಮಿ ಜಗಮೋಹನ್ ದಾಲ್ಮೀಯಾರ (Jagmohan Dalmiya) ಕನಸಿನ ಕೂಸು. ಉದಯೋನ್ಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸಲು, ಐಸಿಸಿಗೆ ಹಣ ಸಂಗ್ರಹಿಸಲು ವಿಶ್ವಕಪ್‌ನ ಹೊರತಾಗಿ ಮತ್ತೊಂದು ಐಸಿಸಿ ಟೂರ್ನಿಗೆ ಯೋಜನೆ ರೂಪಿಸಿದ್ದೇ ದಾಲ್ಮೀಯಾ. ಅವರು 1997 ರಿಂದ 2000 ಇಸವಿ ವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ 1998ರಲ್ಲಿ ಟೂರ್ನಿಗೆ ಚಾಲನೆ ಲಭಿಸಿತು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾಗಲೇ, ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ಸಲುವಾಗಿ ದಾಲ್ಮಿಯಾ ಹಾಕಿದ್ದ ಐಡಿಯಾ ಇದಾಗಿತ್ತು. ಜೊತೆಗೆ, ಟೆಸ್ಟ್ ಮಾನ್ಯತೆಯನ್ನು ಪಡೆಯದ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶವೂ ಇದರಲ್ಲಿತ್ತು.

pakistan champions trophy

ಚೊಚ್ಚಲ ಆವೃತ್ತಿಯಲ್ಲಿ 9 ತಂಡ, ಕೇವಲ 8 ಪಂದ್ಯ
ಮೊದಲ ಆವೃತ್ತಿಯ ನಾಕೌಟ್ ಟ್ರೋಫಿ ಹೆಸರೇ ಸೂಚಿಸುವಂತೆ ಕಿರು ಟೂರ್ನಿಯಾಗಿತ್ತು. ಭಾರತ ಸೇರಿ 9 ತಂಡಗಳು ಪಾಲ್ಗೊಂಡಿದ್ದವು. 1 ಪ್ರಿ ಕ್ವಾರ್ಟರ್, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್, 1 ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಮಾತ್ರ ನಡೆದಿದ್ದವು. 2ನೇ ಆವೃತ್ತಿಯಲ್ಲೂ ಹೆಚ್ಚೇನೂ ಬದಲಾವಣೆಗಳಿರಲಿಲ್ಲ. 11 ತಂಡಗಳು ಪಾಲ್ಗೊಂಡರೂ ಕೇವಲ 10 ಪಂದ್ಯಗಳನ್ನು ಆಡಿಸಲಾಗಿತ್ತು. ಟೂರ್ನಿ ನಾಕೌಟ್ ಮಾದರಿಯಲ್ಲೇ ನಡೆದಿತ್ತು.

ICC Champions Trophy

ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ
1998, 2000ರ ಟೂರ್ನಿ ಐಸಿಸಿಗೆ ದುಡ್ಡು ಗಳಿಸಿಕೊಟ್ಟರೂ, ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯಲು ಯಶಸ್ವಿಯಾಗಿರಲಿಲ್ಲ. ಬಳಿಕ 2002ರ (ಶ್ರೀಲಂಕಾ ಆತಿಥ್ಯ) ಟೂರ್ನಿಯು 2003ರ ಏಕದಿನ ವಿಶ್ವಕಪ್‌ಗೆ 5 ತಿಂಗಳು ಮೊದಲು ಆಯೋಜನೆಗೊಂಡ ಕಾರಣ, ಪ್ರೇಕ್ಷಕರಿಂದ ನಿರಾಸಕ್ತಿ ಜೊತೆಗೆ ಆದಾಯದ ಕೊರತೆಯನ್ನೂ ಎದುರಿಸುವಂತಾಯಿತು. 2004ರಲ್ಲಿ ಇಂಗ್ಲೆಂಡ್‌ನಲ್ಲಿ ಟೂರ್ನಿ ಆಡಿಸಲಾಯಿತು. ಅಲ್ಲೂ ಪ್ರೇಕ್ಷಕರ ಬೆಂಬಲದ ಕೊರತೆ ಎದುರಾಯಿತು. 2006ರಲ್ಲಿ ಭಾರತದಲ್ಲಿ ಟೂರ್ನಿ ನಡೆದರೂ, ಚಾಂಪಿಯನ್ಸ್ ಟ್ರೋಫಿ ಬಗ್ಗೆಯೇ ಟೀಕೆಗಳು ವ್ಯಕ್ತ ವಾಗತೊಡಗಿದವು. ಈ ನಡುವೆ ಟಿ20 ಮಾದರಿ ಕ್ರಿಕೆಟ್‌ನ ಕ್ಷಿಪ್ರ ಬೆಳವಣಿಗೆಯೂ, ಚಾಂಪಿ ಯನ್ಸ್ ಟ್ರೋಫಿಗೆ ಮತ್ತಷ್ಟು ಹೊಡೆತ ನೀಡಿತು. 2007ರಲ್ಲಿ ಟಿ20 ವಿಶ್ವಕಪ್ ಆಯೋಜನೆ ಕೈಗೆತ್ತಿಗೊಂಡ ಐಸಿಸಿ, ಬಳಿಕ ಕೆಲ ವರ್ಷಗಳಲ್ಲೇ ಚಾಂಪಿಯನ್ಸ್ ಟ್ರೋಫಿಯನ್ನು ಕೈ ಬಿಟ್ಟಿತ್ತು.

Team India 2

ಹಣ ಸಂಗ್ರಹಕ್ಕಾಗಿ ಐಸಿಸಿ ಆರಂಭಿಸಿದ್ದ ಪಂದ್ಯಾವಳಿ!
ಕ್ರಿಕೆಟ್ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಯಾವುದೇ ಟೂರ್ನಿ ಇದ್ದರೂ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ದುಡ್ಡು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರಲಿಲ್ಲ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹೊರತಾಗಿ ಇತರ ಕ್ರಿಕೆಟಿಂಗ್ ರಾಷ್ಟ್ರಗಳು ಆದಾಯದ ಕೊರತೆ ಎದುರಿಸುತ್ತಿದ್ದವು. ಐಸಿಸಿಗೆ ಕೂಡಾ ನಿರೀಕ್ಷಿಸಿದಷ್ಟು ದುಡ್ಡು ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಸಂಪಾದಿಸಲು ಐಸಿಸಿ ಕಂಡುಕೊಂಡ ದಾರಿಯೇ ‘ಚಾಂಪಿಯನ್ಸ್ ಟ್ರೋಫಿ’. ಕ್ರಿಕೆಟ್‌ ಪ್ರಿಯ ದೇಶಗಳಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಐಸಿಸಿಗೆ ಹಣ ಸಂಗ್ರಹಕ್ಕಾಗಿ 1998ರಲ್ಲಿ ಮೊದಲ ಬಾರಿ ಟೂರ್ನಿ ಪರಿಚಯಿಸಲಾಯಿತು. ಇದಕ್ಕಾಗಿ ಮೊದಲೆರಡು ಆವೃತ್ತಿಗಳನ್ನು ಆಗ ಐಸಿಸಿ ಸಹಾಯಕ ರಾಷ್ಟ್ರಗಳಾಗಿದ್ದ ಬಾಂಗ್ಲಾದೇಶ, ಕೀನ್ಯಾದಲ್ಲಿ ನಡೆಸಲಾಯಿತು.

Share This Article