ಸ್ಥಳೀಯ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಬೇಕು: ಡಿಕೆಶಿ

Public TV
3 Min Read
DK SHIVAKUMAR SIDDARAMAIAH 1

– ಮೇಕೆದಾಟು, ಮಹದಾಯಿ ದೇವೇಗೌಡರ ಹೋರಾಟವಲ್ಲ, ರಾಜ್ಯದ ಹೋರಾಟ ಎಂದ ಡಿಸಿಎಂ

ಬೆಂಗಳೂರು: ಸಿದ್ದರಾಮಯ್ಯ ನಮ್ಮ ನಾಯಕರು, ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ (Elections) ಅವರು ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದರು.

ಕೆಪಿಸಿಸಿ (KPCC) ಕಚೇರಿಯಲ್ಲಿಂದು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಲ್.ಆರ್ ಶಿವರಾಮೇಗೌಡ ಮತ್ತು ಬ್ರಿಜೇಶ್ ಕಾಳಪ್ಪ, ಎಲ್.ಎಸ್. ಚೇತನ್ ಗೌಡ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಪ್ಲಾಟ್‌ಫಾರ್ಮ್ ಮೆಟ್ಟಿಲಿನಿಂದ ಪ್ರಯಾಣಿಕ ಜಾರಿ ಬಿದ್ದಿದ್ದು ಕಾಲ್ತುಳಿತಕ್ಕೆ ಕಾರಣ: ರೈಲ್ವೆ ಅಧಿಕಾರಿ

HD Devegowda

ಮುಂದಿನ ಚುನಾವಣೆಗೂ ಸಿಎಂ ಬೇಕೆ ಬೇಕು ಎನ್ನುವ ಸಚಿವರುಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ (Siddaramaiah) ನಮ್ಮ ಮುಖ್ಯಮಂತ್ರಿಗಳು, ನಮ್ಮ ನಾಯಕರು. ಎಲ್ಲಾ ಚುನಾವಣೆಗಳಿಗೂ ಅವರು ಬೇಕು. ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಆಗುವ ಅವಕಾಶ ಕೊಟ್ಟಿದೆ. ದಿನ ಬೆಳಗಾದರೇ ಅವರ ಸುದ್ದಿ ಎತ್ತಿಕೊಂಡು ಅವರ ಹೆಸರು ದುರುಪಯೋಗ ಮಾಡೋದು ಬೇಡ. ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಸಿಎಂ ಸಿದ್ದರಾಮಯ್ಯ ಬೇಕು ಎಂದು ಹೇಳಿದರು

ಸಿದ್ದರಾಮಯ್ಯನವರು ಎರಡನೇ ಬಾರಿಯೂ ಸಿಎಂ ಆಗಿ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿ ಆಹಾರ ಆಗಬಾರದು, ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಎಂದರು. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

ಅಧಿಕಾರದಲ್ಲಿದ್ದು ಹೋರಾಟ ಯಾಕೆ ಮಾಡ್ತಾರೆ?
ನೀರಾವರಿ ವಿಚಾರವಾಗಿ ಪಕ್ಷಾತೀತ ಹೋರಾಟ ಮಾಡಬೇಕು ಎಂಬ ದೇವೇಗೌಡರ (HD Devegowda) ಹೇಳಿಕೆ ಬಗ್ಗೆ ಕೇಳಿದಾಗ, ರಾಜ್ಯದ ನೆಲ, ಜಲ ಹಿತಕ್ಕಾಗಿ ನಾವು ಬದ್ಧವಾಗಿದ್ದೇವೆ. ಅವರು ಮೇಕೆದಾಟು ಯೋಜನೆಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ಹೇಳಿದ್ದರು. ಮಹದಾಯಿ ವಿಚಾರವಾಗಿ ನಾವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಇದು ಅವರ ಹೋರಾಟವಲ್ಲ. ರಾಜ್ಯದ ಹೋರಾಟ. ಅವರು ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದರು.

ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಮಗೆ ಅದರ ಅಗತ್ಯವೂ ಇಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು. ನಾವು ಹೋರಾಟ ಮಾಡಿದಾಗ ಅವರು ಯಾವ ರೀತಿ ಟೀಕೆ ಮಾಡಿದ್ದಾರೆ ಎಂದು ನೋಡಿದ್ದೇವೆ. ನಾವು ಅದನ್ನು ಮರೆತು ರಾಜ್ಯದ ಹಿತಕ್ಕಾಗಿ ನೀರಾವರಿ ಯೋಜನೆಗೆ ಪ್ರಯತ್ನಿಸುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ, ಅದನ್ನು ಕೊಟ್ಟಿಲ್ಲ ಎಂದು ಅವರು ಸಂಸತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆ ಕೆಲಸದಲ್ಲೂ ವಿಫಲರಾಗಿದ್ದಾರೆ. ಮೊದಲು ಈ ಕೆಲಸ ಮಾಡಲಿ. ಕಾವೇರಿ ಗೋದಾವರಿ ಜೋಡಣೆ ಮಾಡಿದರೆ ಸಂತೋಷ. ಅವರು ಯೋಜನೆ ತರಲಿ. ನಮ್ಮಿಂದ ಯಾವ ಸಹಕಾರ ಬೇಕು ಹೇಳಲಿ.. ನಾವು ನೀಡುತ್ತೇವೆ. ಇಲ್ಲಿಂದಲೇ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ ಎಂದರು.

ಬೆಂಗಳೂರಿನ ನೀರಿನ ವಿಚಾರವಾಗಿ ಮಾತನಾಡಿದ್ದಾರೆ ಎಂದು ಕೇಳಿದಾಗ, ಅವರ ಪಕ್ಷದ ನಾಯಕರಿಂದ ಗೊಂದಲದ ಹೇಳಿಕೆ ಕೊಡಿಸುತ್ತಿದ್ದಾರೆ. ಡಿ.ಸಿ ತಮ್ಮಣ್ಣ ಅವರಿಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಡಿಪಿಆರ್ ಸಿದ್ಧಪಡಿಸಿದ್ದಾರೆ ಅಷ್ಟೇ. ಇನ್ನೂ ತೀರ್ಮಾನ ಮಾಡಿಲ್ಲ, ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?

Share This Article