ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಕಾಲ್ತುಳಿತದಿಂದ (Delhi Railway Station Stampede) ಕುಂಭಮೇಳಕ್ಕೆ (Maha Kumbh Mela) ಹೊರಟಿದ್ದ 18 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ನವದೆಹಲಿ (Delhi) ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಅದಕ್ಕಾಗಿ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ರೈಲುಗಳಿಗೂ ಮೊದಲು ಭುವನೇಶ್ವರಕ್ಕೆ ತೆರಳಬೇಕಿದ್ದ ರಾಜಧಾನಿ ಮತ್ತು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲುಗಳು ತಡವಾಗಿ ನಿಲ್ದಾಣವನ್ನು ತಲುಪಿದವು. ಹೀಗಾಗಿ ರೈಲು ನಿಲ್ದಾಣದಲ್ಲಿ ಒಮ್ಮೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.
ಇದೇ ಸಮಯಕ್ಕೆ ಪ್ಲಾಟ್ ಫಾರ್ಮ್ 14 ಮತ್ತು 15ಕ್ಕೆ ಪ್ರಯಾಗ್ ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿಗೆ ನುಗ್ಗಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ 18 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಕಳೆದ ಜ.29ರಂದು ಮೌನಿ ಅಮವಾಸ್ಯೆ ದಿನ ಪ್ರಯಾಗ್‌ರಾಜ್‌ನ ಕುಂಭಮೇಳದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನ ಸಾವನ್ನಪ್ಪಿದ್ದರು.