ಅಹಮದಾಬಾದ್: ಹೆಚ್‌ಐವಿ ಏಡ್ಸ್ (HIV AIDS) ಸೋಂಕಿಗೆ ಒಳಗಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮಹಿಳಾ ಸಿಬ್ಬಂದಿಗೆ ಉನ್ನತ ಹುದ್ದೆಗೆ ಬಡ್ತಿ ನಿರಾಕರಿಸುವುದು ತಾರತಮ್ಯದ ಸ್ಪಷ್ಟ ನಿದರ್ಶನವಾಗಿದೆ ಎಂದು ಗುಜರಾತ್ ಹೈಕೋರ್ಟ್ (Gujarat High Court) ಅಸಮಾಧಾನ ಹೊರಹಾಕಿದೆ.
ಏಡ್ಸ್‌ನಿಂದ ಬಳಲುತ್ತಿರುವ ಕಾರಣ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೂ ಬಡ್ತಿ ನಿರಾಕರಿಸಲಾಗುತ್ತಿದೆ ಎಂದು CRPF ಮಹಿಳಾ ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಈ ವಿಷಯವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಗಮನಕ್ಕೆ ತರುವಂತೆ ನ್ಯಾಯಾಲಯವು ನಿರ್ದೇಶಿಸಿತು. ಮಾರ್ಚ್ 6 ರಂದು ಮುಂದಿನ ವಿಚಾರಣೆ ನಡೆಸಲಾಗುತ್ತದೆ. ಆ ದಿನ ಕಾನೂನು ಅಧಿಕಾರಿ ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರತಿವಾದಿಗಳ ಪರವಾಗಿ ಹಾಜರಾದ ವಕೀಲರು CRPF ಮತ್ತು CRPF ಕಮಾಂಡೆಂಟ್ ನಿಯಮದ ಪ್ರಕಾರ ಆದೇಶವನ್ನು ನೀಡಲಾಗಿದೆ ಎಂದು ವಾದಿಸಿದರು. ಅರ್ಜಿದಾರರ ಪರ ವಕೀಲರು, ಅವರು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ಅರ್ಹರಾಗಿದ್ದರೂ ಉನ್ನತ ಹುದ್ದೆಗಳಿಗೆ ಬಡ್ತಿ ನೀಡಲು ನಿರಂತರವಾಗಿ ನಿರಾಕರಿಸಲಾಗಿದೆ ಎಂದು ವಾದಿಸಿದರು.
ಈ ವೇಳೆ, ನ್ಯಾಯಾಲಯ, ಈ ಪ್ರಕರಣವು ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಹೆಚ್‌ಐವಿ-ಏಡ್ಸ್‌ನಿಂದ ಬಳಲುತ್ತಿರುವ ಸಿಬ್ಬಂದಿಗೆ ಮಾಡುತ್ತಿರುವ ತಾರತಮ್ಯದ ಸ್ಪಷ್ಟ ನಿದರ್ಶನಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ.