– ‘ಪಬ್ಲಿಕ್ ಟಿವಿ’ ವಾರ್ಷಿಕೋತ್ಸವ ಸಂದರ್ಶನದಲ್ಲಿ ಹೆಚ್.ಆರ್.ರಂಗನಾಥ್ ಜೊತೆ ಸಿಎಂ ಸಿದ್ದರಾಮಯ್ಯ ಮಾತು
– ದೇವರಾಜ ಅರಸು ಅವಧಿ ರೆಕಾರ್ಡ್ ಬ್ರೇಕಿಂಗ್ ವಿಶ್ವಾಸ ವ್ಯಕ್ತಪಡಿಸಿದ ಸಿಎಂ
– ಪಬ್ಲಿಕ್ ಟಿವಿ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ ಸಿಎಂ
ಬೆಂಗಳೂರು: ಕನ್ನಡದ ಜನಪ್ರಿಯ ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ಯ 13ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಂದರ್ಶನ ನಡೆಸಿದರು. ಈ ವೇಳೆ, ಸಿದ್ದರಾಮಯ್ಯ ಅವರು ಹಲವು ಮಹತ್ವಪೂರ್ಣ ರಾಜಕೀಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚುನಾವಣಾ ರಾಜಕೀಯ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ರಂಗನಾಥ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಚುನಾವಣೆ ರಾಜಕೀಯ ಸ್ವಲ್ಪಮಟ್ಟಿಗೆ ಸಾಕು ಎನಿಸುತ್ತಿದೆ. ಆದರೆ, ಜನರ ಪ್ರೀತಿ-ವಿಶ್ವಾಸ ಜಾಸ್ತಿ ಇರುವುದರಿಂದ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದನ್ನು ಜನರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ. ಮುಂದೆ ಚುನಾವಣೆಯಲ್ಲಿ ನಿಲ್ಲಬಾರದು ಅಂತ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಆದರೆ, ಜನರು, ಹಿತೈಶಿಗಳು ಮತ್ತು ಸ್ನೇಹಿತರು ರಾಜಕೀಯದಲ್ಲಿ ಮುಂದುವರಿಯಬೇಕು ಅಂತಾ ಒತ್ತಡ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಕೂಡ ಜನರು ನಮಗೆ ಅಧಿಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರ ನಂಬಿಕೆಯನ್ನು ಉಳಿಸಿದರೆ ಚಾನೆಲ್ ಗಟ್ಟಿಯಾಗಿ ನಿಲ್ಲುತ್ತದೆ: ಡಿಕೆ ಶಿವಕುಮಾರ್
ಹೆಚ್.ಆರ್.ರಂಗನಾಥ್: ಹಿತೈಷಿಗಳು ರಾಜಕೀಯದಲ್ಲಿ ಮುಂದುವರಿಯಬೇಕು ಎನ್ನುತ್ತಾರೆ ಸರಿ.. ಅಧಿಕಾರದಲ್ಲಿ ಮುಂದುವರಿಯುವ ವಿಚಾರದಲ್ಲಿ ಬಗ್ಗೆ ಏನು ಹೇಳುತ್ತೀರಿ?
ಸಿದ್ದರಾಮಯ್ಯ: ಜನರ ಆಶೀರ್ವಾದ ಇಲ್ಲದಿದ್ದರೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರ ಆಶೀರ್ವಾದ ಬೇಕಾಗುತ್ತದೆ. ಆಮೇಲೆ ಮುಖ್ಯಮಂತ್ರಿ, ಮಂತ್ರಿಯಾಗುವುದಕ್ಕೆ ಹೈಕಮಾಂಡ್ ಮತ್ತು ಶಾಸಕರ ಆಶೀರ್ವಾದ ಬೇಕಾಗುತ್ತದೆ. 2ನೇ ಅವಧಿಗೂ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಂತಸವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹೆಚ್.ಆರ್.ರಂಗನಾಥ್: ನಿಮಗೆ ದಾಖಲೆಗಳಲ್ಲಿ ನಂಬಿಕೆ ಇದೆಯಾ?
ಸಿದ್ದರಾಮಯ್ಯ: ನಾನು ದಾಖಲೆಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮಾಡಿದ್ದೀನಿ. ದಾಖಲೆ ಮಾಡುವ ನಂಬಿಕೆ, ವಿಶ್ವಾಸ ನನಗೆ ಇದೆ. ಮುಡಾ ಕೇಸ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಬೇಕು ಅಂತಲೇ ರಾಜಕೀಯವಾಗಿ ಮಾಡಿದ್ರು. ಯಾವಾಗಲೂ ಸತ್ಯಕ್ಕೆ ಜಯ ಸಿಗುತ್ತೆ.
ಹೆಚ್.ಆರ್.ರಂಗನಾಥ್: ಮಂಡಿ ನೋವು ಹೇಗಿದೆ ಈಗ?
ಸಿದ್ದರಾಮಯ್ಯ: ಮಂಡಿ ನೋವು ಸ್ವಲ್ಪ ಕಡಿಮೆಯಾಗುತ್ತಿದೆ. ಒತ್ತಡ ಬಿದ್ದಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸ್ವಲ್ಪ ತೂಕ ಜಾಸ್ತಿಯೂ ಆಗಿದೆ ಎಂದು ತಮ್ಮ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ. ಬಜೆಟ್‌ಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಸ್ವಲ್ಪ ಮಂಡಿ ನೋವು ಇರುವುದರಿಂದ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ಸಭೆಗಳನ್ನು ಮಾಡ್ತಿದ್ದೇವೆ. ಈ ಬಾರಿ ಮಂಡಿಸುವುದು 16ನೇ ಬಜೆಟ್ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ವಾರ್ಷಿಕೋತ್ಸವಕ್ಕೆ ಸಿಎಂ ಶುಭಹಾರೈಕೆ
2012ರಲ್ಲಿ ನೀವು ಪಬ್ಲಿಕ್ ಟಿವಿ ಪ್ರಾರಂಭ ಮಾಡಿದ್ರಿ. ಅಲ್ಲಿಂದ ಇಲ್ಲಿವರೆಗೆ 13 ವರ್ಷಗಳ ಪ್ರಯಾಣ ಮಾಡಿದ್ದೀರಿ. ಈ ಅವಧಿಯಲ್ಲಿ ಪಬ್ಲಿಕ್ ಟಿವಿ ಜನರ ಪ್ರೀತಿ, ಅಭಿಮಾನ ಗಳಿಸಿದೆ. ಕಾರಣ, ಇದರ ನೇತೃತ್ವ ವಹಿಸಿರುವುದು ನೀವು (ಹೆಚ್.ಆರ್.ರಂಗನಾಥ್). ಪ್ರತಿ ದಿನ ರಾತ್ರಿ 9 ಗಂಟೆಗೆ ಬಿಗ್‌ಬುಲೆಟಿನ್‌ನಲ್ಲಿ ಬರುತ್ತೀರಿ. ಆಗ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತೀರಿ. ಅಭಿಪ್ರಾಯವನ್ನು ಖಡಾಖಂಡಿತವಾಗಿ ತಿಳಿಸುವ ಪ್ರಯತ್ನ ಮಾಡುತ್ತೀರಿ. ಯಾವುದೇ ದ್ವೇಷ-ಅಸೂಯೆ ಇಲ್ಲದೇ ನಿಮ್ಮ ಅಭಿಪ್ರಾಯವನ್ನು ನೇರವಾಗಿ ಜನತೆಗೆ ತಿಳಿಸುವಂತಹದ್ದು ಸ್ವಾಗತಾರ್ಹ ವಿಚಾರ. 13ರ ಸಂಭ್ರಮ. 14ನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಮುಂದೆಯೂ ಕೂಡ ಜನರ ಸಮಸ್ಯೆಗಳನ್ನು ಪರಿಹರಿಸುವಂತಹ ಪ್ರಯತ್ನ ಮಾಡುವುದು ಅತ್ಯಂತ ಅವಶ್ಯಕ. ಪ್ರಸ್ತುತ ಸಮಾಜದಲ್ಲಿರುವ ವೈರುಧ್ಯತೆ ಮತ್ತು ಅಸಮಾನತೆ ತೊಡೆದುಹಾಕುವುದು ಅತ್ಯಂತ ಅವಶ್ಯ. ಈ ವಿಚಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರೇ ಬಹಳ ಹಿಂದೆಯೇ ಹೇಳಿದ್ದಾರೆ. ನಿಮ್ಮ ಮಾಧ್ಯಮದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೀರಿ ಎಂಬ ವಿಶ್ವಾಸ, ನಂಬಿಕೆ ಇದೆ. ಅಸಮಾನತೆ ಹೋಗಲಾಡಿಸಲು, ಧ್ವನಿ ಇಲ್ಲದವರಿಗೆ ದನಿಯಾಗುವ ಕೆಲಸ ಮಾಡುತ್ತೀರೆಂಬ ಭರವಸೆ ಇದೆ. ನಿಮ್ಮ ಚಾನಲ್, ನಿಮಗೆ ಮತ್ತು ನಿಮ್ಮ ಸಿಬ್ಬಂದಿ ವರ್ಗಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.