ಮೆಟ್ರೋ ಟಿಕೆಟ್ ದರ ಏರಿಕೆ | ಸರ್ಕಾರದಿಂದ ಬೆಲೆ ಏರಿಕೆ, ದರ ಹೆಚ್ಚಳದ ಅಭಿಯಾನ: ರವಿಕುಮಾರ್ ವ್ಯಂಗ್ಯ

Public TV
1 Min Read
N. Ravikumar

-ಬಡವರ ಮೇಲೆ ಬರೆ ಹಾಕುವುದು ಸರಿಯಲ್ಲ
ಬೆಂಗಳೂರು: ರಾಜ್ಯ ಸರ್ಕಾರವು ಬೆಲೆ ಏರಿಕೆ, ದರ ಹೆಚ್ಚಳದ ಅಭಿಯಾನವನ್ನೇ ಕೈಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ (N.Ravikumar) ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಬಸ್ ಪ್ರಯಾಣದರ ಹೆಚ್ಚಿಸಿದ್ದರು. ಈಗ ಮೆಟ್ರೋ (Namma Metro) ಟಿಕೆಟ್ ದರ ಹೆಚ್ಚಿಸಿದ್ದಾರೆ. ಈ ರೀತಿ ಹೆಚ್ಚಳದಿಂದ ಮೆಟ್ರೋ, ಬಸ್ ಪ್ರಯಾಣ ಕೈಬಿಟ್ಟು ಸ್ವಂತ ವಾಹನದಲ್ಲಿ ಓಡಾಡಲು ಇನ್ನೂ ಹೆಚ್ಚು ಖರ್ಚಾಗಲಿದೆ ಎಂದು ಎಂದಿದ್ದಾರೆ.

ಜನರು ಅತಿ ಹೆಚ್ಚು ಅಸಹಾಯಕ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಈಗ ಮೆಟ್ರೋ ಟಿಕೆಟ್ ದರ ಎಷ್ಟು ಹೆಚ್ಚಿಸಿದ್ದಾರೆ ಎಂದರೆ, ಬೆಂಗಳೂರಿನಲ್ಲಿ (Bengaluru) 25‌ – 30 ಕಿಮೀ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡಿದರೆ ಹಿಂದೆ 60 ರೂ. ಇತ್ತು. ಈಗ ಅದು 90 ರೂ. ಆಗಿದೆ. 100 ರೂ. ಇದ್ದರೆ ಈಗ 146 ರೂ. ಅಂದರೆ 46% ಏರಿಕೆ ಆಗಿದೆ ಎಂದು ಕಿಡಿಕಾರಿದ್ದಾರೆ.

ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಮೆಟ್ರೋ ಬಂದಿದೆ. ಟ್ರಾಫಿಕ್ ಕಡಿಮೆ ಮಾಡಲು ಮೆಟ್ರೋ ಬಂದರೆ, ಇವರು ಮೆಟ್ರೋ, ಬಸ್ ಪ್ರಯಾಣ ದರ ಏರಿಸುತ್ತಿದ್ದಾರೆ. ಡೀಸೆಲ್, ಪೆಟ್ರೋಲ್ ದರವನ್ನು ಬೇರೆ ರಾಜ್ಯಕ್ಕೆ ಹೋಲಿಸಿದರೆ ಸಿದ್ದರಾಮಯ್ಯರ ಸರ್ಕಾರ ಮೂರು ಸಲ ಹೆಚ್ಚಿಸಿದೆ. ಇದರಿಂದ ಆಟೋ ದರ ಹೆಚ್ಚಾಗಿದೆ. ಆಟೋ, ಬಸ್, ಮೆಟ್ರೋದಲ್ಲಿ ಬಡವರು ಓಡಾಡುತ್ತಾರೆ. ಬಡವರ ಮೇಲೆ ಒಂದಾದ ಬಳಿಕ ಒಂದರಂತೆ ಬರೆ ಹಾಕುವುದು ಸರಿಯಲ್ಲ ಎಂದಿದ್ದಾರೆ.

Share This Article