ಕೆರೆಯಲ್ಲಿ ಈಜಲು ತೆರಳಿದ್ದ ಯುವಕರು ನೀರುಪಾಲು

Public TV
1 Min Read
Two drown while swimming in jinnapura lake Channarayapatna Hassana

ಹಾಸನ: ಕೆರೆಯಲ್ಲಿ ಈಜಲು (Swiming) ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.

ಯಶ್ವಂತ್‌ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಮೃತ ಯುವಕರು.  ಮೃತ ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸ ಮುಗಿಸಿ ಇಬ್ಬರು ಸಂಜೆ ಕೆರೆಗೆ ಈಜಲು ತೆರಳಿದ್ದರು. ಇಬ್ಬರಿಗೂ ಈಜು ಗೊತ್ತಿದ್ದರಿಂದ ಮೊದಲು ರೋಹಿತ್ ಕೆರೆಗೆ ಧುಮುಕಿದ್ದಾನೆ. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ.

ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ಕಾಪಾಡಿ ಎಂದು ಕಿರುಚಿದ್ದಾನೆ. ಈ ವೇಳೆ ಗೆಳೆಯನನ್ನು ರಕ್ಷಿಸಲು ಯಶ್ವಂತ್‌ ಸಿಂಗ್ ಕೆರೆಗೆ ಜಿಗಿದ್ದಾನೆ. ಬಳ್ಳಿ, ಗಿಡಗಂಟಿಗಳ ನಡುವೆ ಸಿಲುಕಿಕೊಂಡ ಯಶ್ವಂತ್‌ ಸಿಂಗ್ ಮತ್ತು ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಡರಾತ್ರಿ ಶೋಧಕಾರ್ಯ ನಡೆಸಿ  ಯುವಕರಿಬ್ಬರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article