U-19 Women’s T20 World Cup: ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಫೈನಲ್‌ಗೆ ಟೀಂ ಇಂಡಿಯಾ ಲಗ್ಗೆ

Public TV
2 Min Read
team india Under 19 womens

– 2ನೇ ಸೆಮಿಫೈನಲ್‌ನಲ್ಲಿ ಆಂಗ್ಲರ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

ಕೌಲಾಲಂಪುರ: ಇಲ್ಲಿ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಭಾರತ (IND vs ENG), ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ (U19 World Cup) ಲಗ್ಗೆ ಇಟ್ಟಿದೆ.

ಆಂಗ್ಲ ಪಡೆ ನೀಡಿದ್ದ 114 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಇನ್ನೂ ಐದು ಓವರ್‌ಗಳು ಬಾಕಿ ಇರುವಾಗಲೇ ಗುರಿ ತಲುಪಿತು. 15 ಓವರ್‌ಗಳಿಗೆ 117 ರನ್‌ ಗಳಿಸಿ ಟೀಂ ಇಂಡಿಯಾ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇನ್ನೂ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೆಣಸಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 113 ಸಾಧಾರಣ ರನ್‌ ಕಲೆಹಾಕಿತು. ತಂಡದ ಡೇವಿನಾ ಪೆರಿನ್ (45), ನಾಯಕಿ ಅಬಿ ನಾರ್ಗ್ರೋವ್ (30) ಬಿಟ್ಟರೆ ಉಳಿದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಪರ ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ 3 ಹಾಗೂ ಆಯುಷಿ ಶುಕ್ಲಾ 2 ವಿಕೆಟ್‌ ಕಿತ್ತು ಗಮನ ಸೆಳೆದರು.

ಆಂಗ್ಲರು ನೀಡಿದ ಸಾಧಾರಣ 114 ರನ್‌ ಗುರಿಯನ್ನು ಭಾರತ ಇನ್ನೂ 5 ಓವರ್‌ ಬಾಕಿ ಇರುವಾಗಲೇ ತಲುಪಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಜಿ ಕಮಲಿನಿ ಅರ್ಧಶತಕ (56 ರನ್‌, 50 ಬಾಲ್‌, 8 ಫೋರ್‌) ಗಳಿಸಿ ಮಿಂಚಿದರು. ಇವರಿಗೆ ಗೊಂಗಡಿ ತ್ರಿಶಾ ಸಾಥ್‌ ನೀಡಿದರು. ತ್ರಿಶಾ (35), ಸನಿಕಾ ಚಲ್ಕೆ (11) ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

2023ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತೀಯ ಮಹಿಳಾ ತಂಡವೇ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್‌ ತಂಡ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

Share This Article