Maha Kumbh Mela| ಸನ್ಯಾಸಿನಿಯಾಗಲು ಹೊರಟ ಮಮತಾ ಕುಲಕರ್ಣಿ ಅಖಾಡದಿಂದಲೇ ಔಟ್‌

Public TV
1 Min Read
mamta kulkarni 2

ಪ್ರಯಾಗ್‌ರಾಜ್: ಮಹಾಕುಂಭ ಮೇಳದಲ್ಲಿ ಸನ್ಯಾಸಿನಿಯಾಗಲು ಹೊರಟ ಬಾಲಿವುಡ್‌ ನಟಿ ಮಮತಾ ಕುಲಕರ್ಣಿ (Mamta Kulkarni) ಅವರನ್ನು ಕಿನ್ನರ ಅಖಾಡದಿಂದ (Kinnar Akhara) ಹೊರ ಹಾಕಲಾಗಿದೆ.

ಕಿನ್ನರ ಅಖಾಡ ಸ್ಥಾಪಕ ರಿಷಿ ಅಜಯ್ ದಾಸ್ ಶುಕ್ರವಾರ ಮಮತಾ ಕುಲಕರ್ಣಿ ಅವರನ್ನು ಅಖಾಡದಿಂದಲೇ ಹೊರಹಾಕಿದ್ದಾರೆ.

ದೇಶದ್ರೋಹದ ಆರೋಪ ಹೊತ್ತಿರುವ ಮಮತಾ ಕುಲಕರ್ಣಿಯನ್ನು ಅಖಾಡಕ್ಕೆ ಸೇರಿಸಿದ್ದು ಮಾತ್ರವಲ್ಲದೇ ತನ್ನ ಅರಿವಿಲ್ಲದೆ ಅವರನ್ನು ಮಹಾಮಂಡಲೇಶ್ವರ ಎಂದು ನೇಮಿಸಿದ್ದಕ್ಕಾಗಿ ಮಹಾಮಂಡಲೇಶ್ವರ ಲಕ್ಷ್ಮಿನಾರಾಯಣ ತ್ರಿಪಾಠಿ ಅವರನ್ನೂ ಸಹ ಕಿನ್ನರ ಅಖಾಡದಿಂದ ಹೊರ ಹಾಕಿದ್ದಾರೆ. ಇದನ್ನೂ ಓದಿ: ಗಮನಿಸಿ, ನಾಳೆಯಿಂದ ವಿಶೇಷ ಅಕ್ಷರ/ ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸೆಂಡ್‌ ಆಗಲ್ಲ

mamta kulkarni 1

90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದರು. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದರು.

ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದರು.

Mamata Kulkarni

ಮಮತಾ ಕುಲಕರ್ಣಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಕಿನ್ನರ ಅಖಾಡಕ್ಕೆ ಸೇರ್ಪಡೆಯಾಗಿ ಮಹಾಮಂಡಲೇಶ್ವರರಾಗಿದ್ದರು. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದರು.

ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article